ಬೆಂಗಳೂರು :ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಗೋಹತ್ಯೆ ಪ್ರಕರಣ ಕಂಡು ಬಂದಲ್ಲಿ ಆಯಾ ಪ್ರದೇಶದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇದಕ್ಕೆ ಬೆನ್ನೆಲುಬಾಗಿ ನಿಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ, ಪಕ್ಷದ ವರಿಷ್ಠರಿಗೆ, ರಾಜ್ಯದ ಎಲ್ಲಾ ಬಿಜೆಪಿ ಶಾಸಕರಿಗೆ, ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗೋವು ಸಂರಕ್ಷಣೆಯಲ್ಲಿ ತೊಡಗಿರುವವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್
ಗೋಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಕಸಾಯಿಖಾನೆಗೆ ಒಯ್ಯುವಾಗ ರಕ್ಷಿಸಲಾದ ಗೋವುಗಳನ್ನು ಸಾಕಲು ಸಾರ್ವಜನಿಕರು ಮುಂದೆ ಬಂದರೆ, ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಆರ್ಥಿಕವಾಗಿ ಸಬಲರು, ಆಸಕ್ತರು ಗೋವನ್ನು ಮನೆಯಲ್ಲಿ ಸಾಕಿದರೆ ಸಂರಕ್ಷಣೆಗೆ ಮತ್ತಷ್ಟು ಬಲ ದೊರೆತಂತಾಗುತ್ತದೆ. ಗೋವಿನ ಬಗ್ಗೆ ಸಮಾಜದಲ್ಲಿರುವ ಪ್ರೀತಿ, ಶ್ರದ್ಧೆ ಮತ್ತು ಸಂರಕ್ಷಣಾ ಮನೋಭಾವ ದೇಸಿ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಅಧಿಕಾರಿಗಳಿಗೆ ಸೂಚನೆ:ಕಳ್ಳ ಸಾಗಣೆ ಮತ್ತು ವಧೆ ತಡೆದು ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆಗಳಿಗೆ ನೀಡಿ ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗೋಹತ್ಯೆ ನಿಷೇಧದ ನಂತರ ಗೋವುಗಳ ನಿರ್ವಹಣೆಗೆ ತಗುಲುವ ವೆಚ್ಚದ ಅಂದಾಜು ಮತ್ತು ವ್ಯವಸ್ಥೆಯ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಗೋಶಾಲೆ ಮತ್ತು ಗೋವುಗಳ ನಿರ್ವಹಣೆಯ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ದೇಸಿ ಹಸುಗಳ ಉತ್ಪನ್ನಗಳ ಬಳಕೆಗೆ ಆದ್ಯತೆ :ಹಾಲು, ಮೊಸರು, ಬೆಣ್ಣೆ, ತುಪ್ಪ ಮಾತ್ರವಲ್ಲದೆ, ಗೋವುಗಳ ಸಗಣಿ ಮತ್ತು ಮೂತ್ರದಿಂದ ತಯಾರಾಗುತ್ತಿರುವ ಇತರೆ ಉತ್ಪನ್ನಗಳಾದ ಗೋಭಸ್ಮ, ಸೋಪು, ಶಾಂಪೂ, ಅಗರಬತ್ತಿ, ಪಂಚಗವ್ಯ, ವರ್ಮಿ ಕಾಂಪೋಸ್ಟ್, ಗೋಅರ್ಕ್, ಗೋನಾಯ್ಲ್ , ಕೀಟನಾಶಕ ಇತ್ಯಾದಿಗಳನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಬಳಸುವುದರ ಮೂಲಕ ಗೋ ಸಂರಕ್ಷಣೆಗೆ ಸಹಕರಿಸಬೇಕು ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನ ಸಹ ನಡೆಸಲಾಗುವುದು ಎಂದಿದ್ದಾರೆ.