ಬೆಂಗಳೂರು: ಕೆಇಎ ಪರೀಕ್ಷೆ ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಬೆಂಗಳೂರಿನಲ್ಲಿ ಆರೋಪಿ ಆರ್.ಡಿ.ಪಾಡೀಲ್ ಪರಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆತ ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದಾನೆಂಬ ಮಾಹಿತಿ ಇದೆ. ಪೊಲೀಸರ ನಿರ್ಲಕ್ಷ್ಯದಿಂದ ತಪ್ಪಿಸಿಕೊಂಡಿದ್ದರೆ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಆರ್.ಡಿ.ಪಾಟೀಲ್ ಮೇಲೆ ಸಾಕಷ್ಟು ಕೇಸ್‌ಗಳಿವೆ. ತಪ್ಪಿಸಿಕೊಂಡು ಎಲ್ಲಿಗೆ ಎಷ್ಟು ದಿವಸ ಹೋಗ್ತಾರೆ. ಪ್ರಕರಣವನ್ನು ಅಗತ್ಯವಿದ್ದರೆ ಸಿಐಡಿ ತನಿಖೆಗೆ ಕೊಡುತ್ತೇವೆ ಎಂದರು.
ಮರು ಪರೀಕ್ಷೆ ನಡೆಸುವ ಬಗ್ಗೆ ಕೆಇಎ ತೀರ್ಮಾನ ಮಾಡುತ್ತೆ. ನಮಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ತನಿಖೆ ಮಾಡ್ತಿದ್ದೇವೆ. ಕಿಂಗ್‌ಪಿನ್‌ಗಳು ಭಯ ಇಲ್ಲದಿರುವುದಕ್ಕೆ ಇಷ್ಟು ದಿವಸ ಹೀಗೆ ಮಾಡಿದ್ದಾರೆ. ಇನ್ಮುಂದೆ ಹಾಗೆ ಆಗದಂತೆ ಮಾಡ್ತೀವಿ ಎಂದರು.
ಇದೇ ವೇಳೆ, ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೆ ಮುನಿಯಪ್ಪ ಸೇರಿ ಎಡ ಸಮುದಾಯ ನಾಯಕರ ಒತ್ತಾಯ ಇದೆ. ನಿನ್ನೆ ಎಡ ಸಮುದಾಯದ ಮುಖಂಡರಿಂದ ಸಭೆ ನಡೆದಿದೆ. ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ್ವಿ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಇದೆ. ಮೊದಲ ಅಧಿವೇಶನದಲ್ಲೇ ಮಂಡನೆ ಮಾಡುವ ತೀರ್ಮಾನವನ್ನು ಕೂಡ ತೆಗೆದುಕೊಂಡಿದ್ವಿ. ಕಾರಣಾಂತರಗಳಿಂದ ಮೊದಲ ಅಧಿವೇಶನದಲ್ಲಿ ಆಗಿಲ್ಲ ಎಂದು ಹೇಳಿದರು.