ಬೆಂಗಳೂರು: ಎಲೆಕ್ಟ್ರಿಕ್ ವಾಹನ(electric vehicle)ಗಳ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳನ್ನು ನೋಡಿದರೆ ಮುಂದಿನ 5 ವರ್ಷಗಳಲ್ಲಿ ದೇಶಕ್ಕೆ ವಿಶ್ವದಲ್ಲೇ ಮೊದಲ ಸ್ಥಾನ ಸಿಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Minister Nitin Gadkari) ಹೇಳಿದ್ದಾರೆ.
ನಗರದ ಆರ್ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ದಿವಂಗತ ಅನಂತಕುಮಾರ್ ಅವರ 3ನೇ ಪುಣ್ಯತಿಥಿಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಅನಂತ್ ಕುಮಾರ್ ಸ್ಮಾರಕ ಉಪನ್ಯಾಸದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದರು.
ಇವಿ ಹಾಗೂ ಗ್ರೀನ್ ಹೈಡ್ರೋಜನ್ ರೀತಿಯ ಹಲವಾರು ಕ್ರಾಂತಿಕಾರಿ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ, ಅದರಲ್ಲೂ ಬೆಂಗಳೂರು ನಗರ ದೇಶದ ಗ್ರೀನ್ ಎಕಾನಮಿಗೆ ಅಪಾರ ಕೊಡುಗೆ ನೀಡುತ್ತಿದೆ ಎಂದರು.
ದಿವಂಗತ ಅನಂತ್ಕುಮಾರ್ ಅವರ 3 ನೇ ಪುಣ್ಯತಿಥಿ ಕಾರ್ಯಕ್ರಮ ದೇಶದಲ್ಲಿ ಗ್ರೀನ್ ಎಕಾನಮಿ ಬಹಳ ವೇಗವಾಗಿ ಅಭಿವೃದ್ದಿಗೊಳ್ಳುತ್ತಿದೆ. ಇವಿ ಹಾಗೂ ಗ್ರೀನ್ ಹೈಡ್ರೋಜನ್ ರೀತಿಯ ಕ್ಷೇತ್ರಗಳಲ್ಲಿ ಬೆಂಗಳೂರು ನಗರದ ಸ್ಟಾರ್ಟ್ ಅಪ್ಗಳು ಪ್ರಮುಖ ಸಂಶೋಧನೆಯನ್ನು ಕೈಗೊಂಡಿವೆ.
ಕರ್ನಾಟಕ ರಾಜ್ಯದಲ್ಲಿ ಇಥೆನಾಲ್ ಉತ್ಪಾದನೆ ಹೆಚ್ಚಾಗಿದೆ. ಫ್ಲೆಕ್ಸ್ ಇಂಜಿನ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಯಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಲ್ಲಿ ಬೆಂಗಳೂರು ನಗರದ ಕೊಡುಗೆ ಬಹಳಷ್ಟಿದೆ.
ಮುಂಬರುವ ದಿನಗಳಲ್ಲಿ ದೇಶದಲ್ಲಿ ಹಸಿರು ಆರ್ಥಿಕತೆ ಅಭಿವೃದ್ದಿಯಾಗಲಿದ್ದು, ಅದರಲ್ಲಿ ಬೆಂಗಳೂರು ನಗರದ ಸ್ಟಾರ್ಟ್ ಅಪ್ಗಳು ನೇತೃತ್ವ ವಹಿಸಲಿದೆ ಎಂದರು.
ಒಳನಾಡು ಜಲಸಾರಿಗೆಗೆ ಹೆಚ್ಚಿನ ಮಹತ್ವ: ದೇಶದಲ್ಲಿ ಸಾಗಾಣಿಕೆ ವೆಚ್ಚ ಹೆಚ್ಚಿದೆ. ಇದನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಂತರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ಒಳನಾಡು ಜಲಸಾರಿಗೆಗೆ ಮಾರ್ಗಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ರಿಂಗ್ ರಸ್ತೆ: ಅನಂತ್ ಕುಮಾರ್ ಅವರ ಬಹುದಿನಗಳ ಕನಸಾಗಿದ್ದ ಬೆಂಗಳೂರು ರಿಂಗ್ ರಸ್ತೆಯ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಯನ್ನು ನಡೆಸಲಾಗಿದೆ. ಚುನಾವಣೆಯ ನೀತಿ ಸಂಹಿತೆಯ ನಂತರ ರಾಜ್ಯಕ್ಕೆ ಆಗಮಿಸಿ ಕಾಮಗಾರಿ ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
ಅನಂತ್ ಸ್ಮರಣೆ: ದಿವಂಗತ ಅನಂತ್ಕುಮಾರ್ ಅವರೊಂದಿಗೆ ತಮಗಿದ್ದ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡ ಅವರು, ದೇಶದ ಪ್ರಸಕ್ತ ರಾಜಕಾರಣದಲ್ಲಿ ಅನಂತಕುಮಾರ್ ಅವರ ಕೊರತೆ ಎದ್ದು ಕಾಣುತ್ತಿದೆ. ದೇಶ ಅದರಲ್ಲೂ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ.
ಅವರು ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾವು ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆವು. ಈ ಮೂಲಕ ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತದಲ್ಲಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಯಿತು ಎಂದು ಹೇಳಿದರು.
ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬೆಳೆಯುವಲ್ಲಿ ಅನಂತಕುಮಾರ್ ಅವರಂತಹ ಸದಸ್ಯರ ಕೊಡುಗೆ ಬಹಳ ಅಪಾರವಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಅನಂತಕುಮಾರ್, ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಅವರಂತಹ ಪ್ರಮುಖರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಅನಂತಕುಮಾರ್ ಅವರಿಗೆ ಇನ್ನು ರಾಜಕಾರಣದಲ್ಲಿ ಬಹಳಷ್ಟು ಅವಕಾಶವಿತ್ತು. ಅವರ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳುವಲ್ಲಿ ಆದ ತಡದಿಂದಾಗಿ ಅವರನ್ನು ಅಕಾಲಿಕವಾಗಿ ಕಳೆದುಕೊಳ್ಳಬೇಕಾಯಿತು ಎಂದು ದುಃಖ ವ್ಯಕ್ತಪಡಿಸಿದರು.
ಅನಂತಕುಮಾರ್ ಅವರ ಸಾಮಾಜಿಕ ಕಳಕಳಿ ಅಪಾರ :ಸಾಮಾನ್ಯ ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ನಂಬಿದ್ದ ಅನಂತ್ಕುಮಾರ್ ಅವರು ಅಪಾರ ಸಾಮಾಜಿಕ ಕಾಳಜಿಯನ್ನು ಹೊಂದಿದ್ದರು. ಅವರು ತಮ್ಮ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರೊಂದಿಗೆ ಸೇರಿ ಪ್ರಾರಂಭಿಸಿದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ದೇಶದ ಲಕ್ಷಾಂತರ ಮಕ್ಕಳ ಹಸಿವನ್ನು ಇಂದಿಗೂ ನೀಗಿಸುತ್ತಿದೆ ಎಂದರು.
ಓದಿ:ಸಭಾಧ್ಯಕ್ಷರು 10 ನಿಮಿಷ ಕಾದರೂ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕರಿಸಲು ಆಗಮಿಸಲಿಲ್ಲ: ವಿಧಾನಸಭೆ ಸಚಿವಾಲಯ ಸ್ಪಷ್ಟನೆ