ಬೆಂಗಳೂರು :ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ನಾಳೆ ಬಳ್ಳಾರಿಯಲ್ಲಿ 1.38 ಲಕ್ಷ ರೇಷ್ಮೆ ಬೆಳೆಗಾರರಿಗೆ ಇಲಾಖೆ ವತಿಯಿಂದ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಯುವ ಸಬಲೀಕರಣ, ಕ್ರೀಡಾ ಹಾಗೂ ಸಾಂಖ್ಯಿಕ ಸಚಿವ ನಾರಾಯಣಗೌಡ ಹೇಳಿದರು.
ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ನಾರಾಯಣ ಗೌಡ ಇಂದು ಸಂಜೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಡಾ.ನಾರಾಯಣಗೌಡ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಚರ್ಚಿಸಲಾಯಿತು.
ರೇಷ್ಮೆ ಬೆಳೆಗಾರರಿಗೆ ಭರವಸೆ ನೀಡಿದ 20 ದಿನದಲ್ಲೇ ಐಡಿ ಕಾರ್ಡ್ ವಿತರಣೆ :ಶಿವಮೊಗ್ಗದಲ್ಲಿ ರೇಷ್ಮೆ ಬೆಳೆಗಾರರ ಜೊತೆ ನಡೆದ ಸಂವಾದದಲ್ಲಿ ಪೊಲೀಸರು ಸೇರಿ ಹಲವರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಚಿವರ ಮುಂದೆ ಅಳಲು ತೋಡಿಕೊಂಡಿದ್ದರು.
ಈ ವೇಳೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಇಲಾಖೆಯಿಂದ ಐಡಿ ಕಾರ್ಡ್ ನೀಡುವುದಾಗಿ ಸಚಿವರು ಘೋಷಿಸಿದ್ದರು. ಇದಾದ 20 ದಿನದಲ್ಲೇ ಐಡಿ ಕಾರ್ಡ್ ನೀಡುವ ಕಾರ್ಯವನ್ನು ಜಾರಿಗೆ ತಂದಿದ್ದಾರೆ.
ನಾಳೆ ಬಳ್ಳಾರಿಯಲ್ಲಿ ಉಚಿತ ಐಡಿ ಕಾರ್ಡ್ ನೀಡುವ ಕಾರ್ಯಕ್ರಮಕ್ಕೆ ಸಚಿವ ನಾರಾಯಣಗೌಡ ಅವರು ಚಾಲನೆ ನೀಡಲಿದ್ದಾರೆ. ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಐಡಿ ಕಾರ್ಡ್ ವಿತರಿಸಲಾಗುತ್ತದೆ ಎಂದರು.
ಹೆಚ್ಚುವರಿ 50 ಲಕ್ಷ ವೆಚ್ಚ :ರೇಷ್ಮೆ ಬೆಳಗಾರರಿಗೆ ಆಗುತ್ತಿದ್ದ ಹೊರೆಯನ್ನು ತಪ್ಪಿಸಲು ಉತ್ತರ ಕರ್ನಾಟಕದ 13 ಜಿಲ್ಲೆಯ ರೇಷ್ಮೆ ಬೆಳೆಗಾರಿಗೆ ಪ್ರತಿ ಕೆಜಿಗೆ 10 ರೂ. ಸಾಗಾಣಿಕೆ ವೆಚ್ಚ ನೀಡಲಾಗುತ್ತಿದೆ. ಇದೀಗ ಮತ್ತೆ ಹೊಸದಾಗಿ 10 ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಸಾಗಾಣಿಕೆ ವೆಚ್ಚ ನೀಡಲು ನಿರ್ಧರಿಸಲಾಗಿದೆ.
ಇದರಿಂದ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡದ ಬೆಳೆಗಾರರಿಗೆ ಅನುಕೂಲ ಆಗಲಿದೆ. ಇದರಿಂದ ಇಲಾಖೆಗೆ ಹೆಚ್ಚುವರಿ 50 ಲಕ್ಷ ಹೊರೆಯಾಗಲಿದೆ ಎಂದರು.
ಕೆಎಸ್‌ಎಂಬಿ ವತಿಯಿಂದಲೇ ರೇಷ್ಮೆ ಖರೀದಿ :ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಎಸ್‌ಎಂಬಿಯಿಂದಲೇ ರೇಷ್ಮೆ ಖರೀದಿಸುವ ಬಗ್ಗೆ ಚರ್ಚಿಸಲಾಯಿತು. ಇಲಾಖೆಯಿಂದಲೆ ರೇಷ್ಮೆ ಖರೀದಿಸುವುದರಿಂದ ರೈತರಿಗೂ ಅನುಕೂಲ ಆಗಲಿದೆ. ಜೊತೆಗೆ ಇಲಾಖೆಗೂ ಲಾಭ ಬರಲಿದೆ. ಹಾಗಾಗಿ, ಅದಕ್ಕೆ ಬೇಕಾದ ಸಿಬ್ಬಂದಿ ಸೇರಿದಂತೆ ಅಗತ್ಯ ಕ್ರಮಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವರು :ಬೆಂಗಳೂರಿನ ಓಕಳಿಪುರಂನಲ್ಲಿ ಪಿಪಿಪಿ ಮಾದರಿಯಲ್ಲಿ ರೇಷ್ಮೆ ಭವನ ನಿರ್ಮಾಣ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಅವರು ತರಾಟೆಗೆ ತೆಗೆದುಕೊಂಡರು.
ಎರಡು ವರ್ಷದ ಹಿಂದೆಯೇ ಅಪ್ರೂವಲ್ ಸಿಕ್ಕಿದ್ದರೂ ಟೆಂಡರ್ ಕರೆಯಲು ಪ್ಲಾನಿಂಗ್ ಸಿದ್ದಪಡಿಸದೆ ಸಬೂಬು ಹೇಳುತ್ತಿರುವ ಎಂಜಿನಿಯರ್ ಹಾಗೂ ಆರ್ಕಿಟೆಕ್ಟರ್ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಮೂರು ದಿನದೊಳಗೆ ಪ್ಲಾನಿಂಗ್ ರಿಪೋರ್ಟ್ ಸಲ್ಲಿಸಬೇಕು. ಇಲ್ಲದಿದ್ದರೆ ಇಲಾಖೆಯಿಂದ ಖಾಲಿ ಮಾಡಬೇಕೆಂದು ತಾಕೀತು ಮಾಡಿದರು.
ರೇಷ್ಮೆ ಮಾರುಕಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ :ರೇಷ್ಮೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಿರುಕುಳ ಹಾಗೂ ದಲ್ಲಾಳಿಗಳ ಹಾವಳಿ ತಪ್ಪಿಸಲು ಎಲ್ಲಾ ರೇಷ್ಮೆ ಮಾರುಕಟ್ಟೆಯಲ್ಲಿ ಐಪಿ ಆಧಾರಿತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿರುವ 41 ಮಾರುಕಟ್ಟೆಗಳಲ್ಲಿ 29 ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಆದರೆ, ರಾಜ್ಯದ ಎಲ್ಲಾ ರೇಷ್ಮೆ ಮಾರುಕಟ್ಟೆಯಲ್ಲಿ ಐಪಿ ಆಧಾರಿತ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧಾರಿಸಲಾಗಿದೆ. ಇದಕ್ಕೆ 1.25 ಕೋಟಿ ಖರ್ಚಾಗಲಿದ್ದು, ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ರಾಮನಗರ ಸೇರಿ ಹಲವು ಮಾರುಕಟ್ಟೆಯಲ್ಲಿ ರೈತರ ಬಳಿ ರೇಷ್ಮೆ ಗೂಡನ್ನು ಕದಿಯುತ್ತಿದ್ದಾರೆ. ಈ ಬಗ್ಗೆ ಹಲವು ದೂರುಗಳು ಬರುತ್ತಿವೆ.
ಮಾರುಕಟ್ಟೆಯಲ್ಲಿ ರೈತರ ಬಳಿಯಲ್ಲಿ ರೇಷ್ಮೆ ಕದಿಯುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ. ಅಂತಹ ಖದೀಮರಿಗೆ ಕಡಿವಾಣ ಹಾಕಬೇಕು. ಮಾರುಕಟ್ಟೆ ಸುಳಿಯದಂತೆ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಶಾಮೀಲಾಗಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ : ದುಬಾರಿ ದುನಿಯಾದಲ್ಲಿ ಗ್ರಾಹಕರು-ಮಾರಾಟಗಾರರು ತತ್ತರ