ಬೆಂಗಳೂರು:ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಸಚಿವ ನಾರಾಯಣಗೌಡ ಅವರು ಬಿಜೆಪಿ ವರಿಷ್ಠ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಮಿತ್ ಶಾ ಭೇಟಿ ಇದೀಗ ಹಲವು ಕುತೂಹಲಕ್ಕೆ ಕಾರಣವಾಗಿದೆ. ಅವರ ಪಕ್ಷ ತೊರೆಯುವ ಯೋಚನೆಗೆ ಸದ್ಯ ತೆರೆ ಬಿದ್ದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಅಮಿತ್ ಶಾ ಜೊತೆಗೆ ಸುದೀರ್ಘ ಚರ್ಚೆ:ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಅವರು, ಎರಡು ದಿನಗಳ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರೆಯ ಮೇರೆಗೆ ದೆಹಲಿಗೆ ತೆರಳಿದ್ದರು. ಶಾ ಅವರನ್ನು ಭೇಟಿ ಮಾಡಿದ ಸಚಿವ ಡಾ. ನಾರಾಯಣಗೌಡ ಸುದೀರ್ಘವಾಗಿ ಚರ್ಚಿಸಿದರು. ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿ, ರಾಜಕೀಯ ವಿದ್ಯಾಮಾನದ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದರು.
ಚರ್ಚೆ ವೇಳೆ ಮಂಡ್ಯ ಜಿಲ್ಲೆಯ ರಾಜಕಾರಣದ ಕುರಿತು ಸಚಿವ ಡಾ.ನಾರಾಯಣಗೌಡ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಸಚಿವ ಅಮಿತ್ ಶಾ, ಮಂಡ್ಯ ಜಿಲ್ಲೆಯಲ್ಲಿ ನಾಯಕತ್ವ ತೆಗೆದುಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಒಂದು ತಿಂಗಳಿಂದ ಸಚಿವ ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಬಲವಾಗಿ ಹರಿದಾಡುತ್ತಿತ್ತು. ಈ ಸಂಬಂಧ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ, ಇದೀಗ ಅಮಿತ್ ಶಾ ಭೇಟಿ ಭಾರೀ ಕುತೂಹಲ ಕೆರಳಿಸಿದೆ. ಆ ಮೂಲಕ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿಗೆ ಇದೀಗ ತೆರೆ ಬಿದ್ದಿದೆ.
ಬಿ. ಎಲ್. ಸಂತೋಷ್ಗೂ ಭೇಟಿ:ದೆಹಲಿ ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ನಾರಾಯಣಗೌಡ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮಾಡಬಹುದಾದ ಹೊಂದಾಣಿಗೆ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಹೊಂದಾಣಿಕೆ ಮಾಡುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತದೆ.
ನಾರಾಯಣಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ಭೇಟಿ:ಯುಗಾದಿ ದಿನದಂದು ಸಚಿವ ನಾರಾಯಣಗೌಡ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ತಮ್ಮ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿದ್ದರು. ಯಡಿಯೂರಪ್ಪ ಅವರೂ ನಾರಾಯಣಗೌಡರಿಗೆ ಅಭಯ ನೀಡಿದ್ದರು. ಪಕ್ಷ ತೊರೆಯದಂತೆ ಮನವೊಲಿಕೆ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಬಿಎಸ್ವೈ ಹೇಳಿಕೆ ನೀಡಿ, ಸಚಿವ ನಾರಾಯಣಗೌಡರ ಬಳಿ ಮಾತುಕತೆ ನಡೆಸಿದ್ದೇನೆ. ಈಗಿರುವ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಸಂತೋಷವಾಗಿ ಬಿಜೆಪಿಯಲ್ಲೇ ಇದ್ದು ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಮಂಡ್ಯ ಭಾಗದಲ್ಲಿ ಪಕ್ಷ ಬಲಪಡಿಸಲು ಸಲಹೆ:ಅಮಿತ್ ಶಾ ಭೇಟಿ ವೇಳೆ ಮಂಡ್ಯ ಜಿಲ್ಲೆಯಲ್ಲಿ ನಾಯಕತ್ವ ತೆಗೆದುಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕುರಿತು ಮಾತುಕತೆ ನಡೆಸಿದ್ದಾರೆ. ಮಂಡ್ಯ ಭಾಗದಲ್ಲಿ ಪಕ್ಷ ಬಲ ಪಡಿಸಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡಲು ಯತ್ನಿಸುವಂತೆ ಸೂಚನೆ ನೀಡಿದ್ದಾರೆ. ಯಾವುದಕ್ಕೂ ಆತಂಕ ಬೇಡ. ನಿರಾತಂಕವಾಗಿ ಕೆಲಸ ಮಾಡಿ ಎಂದು ಅಮಿತ್ ಶಾ ಅಭಯ ನೀಡಿದ್ದಾರೆ ಎಂಬುದು ತಿಳಿದುಬದಿದೆ.
ಇದನ್ನೂ ಓದಿ:ಇನಾಂ ಭೂಮಿ ಕಬಳಿಕೆ ಆರೋಪ ಮಾಡಿದವರ ವಿರುದ್ಧ ಮಾನಹಾನಿ ಪ್ರಕರಣ: ಸಚಿವ ಆನಂದ್ ಸಿಂಗ್