ಬೆಂಗಳೂರು: ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ (ಪ್ರವೇಶ ಪತ್ರ) ನಿರಾಕರಿಸದಂತೆ ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲಿ ತಿಳಿಸಿದರು.
ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಮಂಜುನಾಥ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಡಿಡಿಪಿಐ ಮತ್ತು ಬಿಇಒಗಳ ಜೊತೆ ಸಭೆ ನಡೆಸಿ ಯಾವುದೇ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನಿರಾಕರಿಸದಂತೆ ಸೂಚನೆ ನೀಡಲಾಗಿದೆ. ಡಿಡಿಪಿಐ ಹಾಗೂ ಬಿಇಒಗಳ ಜೊತೆ ಸಭೆ ನಡೆಸಿ ಶುಲ್ಕ ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆ ಮಾಡಬಾರದು ಎಂದು ಶಾಲಾ ಆಡಳಿತ ಮಂಡಳಿಗೆ ಸ್ಪಷ್ಟನೆ ನೀಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಗರ್ಭಿಣಿ, ಬಾಣಂತಿಯರಿಗೆ ಅವೈಜ್ಞಾನಿಕ ನಿಯಮ: ಸ್ಪೀಕರ್ ಕಾಗೇರಿ ಅಸಮಾಧಾನ
ಕೆಲವು ಶಾಲೆಗಳಲ್ಲಿ ಆಡಳಿತ ಮಂಡಳಿಯವರು ಶುಲ್ಕ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಕೊಡುವುದಿಲ್ಲ ಎನ್ನುವುದು, ಇಲ್ಲವೇ ಟಿಸಿ, ಮಾರ್ಕ್ಸ್ ಕಾರ್ಡ್ ಅಥವಾ ಶಾಲೆಯಿಂದ ಹೊರಗೆ ನಿಲ್ಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಕೆಲ ದಿನಗಳ ಹಿಂದೆಯೇ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ದೇಶನ ನೀಡಿರುವುದರಿಂದ ಈ ಬಗ್ಗೆ ಯಾರೂ ಕೂಡ ಆತಂಕಗೊಳ್ಳಬಾರದು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಮಂಜುನಾಥ್, ಅನುದಾನ ಮತ್ತು ಖಾಸಗಿ ಶಾಲೆಗಳಲ್ಲಿ ಶುಲ್ಕ ಕಟ್ಟದಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಇರಿಸುವುದು, ಪ್ರವೇಶ ಪತ್ರ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಪೋಷಕರು ಈ ಬಗ್ಗೆ ನನ್ನ ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ. ಇದು ಕೇವಲ ನನ್ನ ಕ್ಷೇತ್ರದ ಸಮಸ್ಯೆ ಅಲ್ಲ.
ರಾಜ್ಯಾದ್ಯಂತ ಈ ರೀತಿಯ ಸಮಸ್ಯೆಗಳಿವೆ ಎಂದರು. ತಕ್ಷಣವೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಎಂದು ನಾನು ಹೇಳುವುದಿಲ್ಲ. ಶಾಲೆಯವರಿಗೂ ಸಮಸ್ಯೆ ಇರುತ್ತದೆ. ಕಡೆ ಪಕ್ಷ ಪೋಷಕರಿಗೂ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು .