ಬೆಂಗಳೂರು: ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳ ಭರ್ತಿಗೆ ಎದುರಾಗಿರುವ ತೊಂದರೆಗಳ ಕುರಿತು ವಿಧಾನ ಪರಿಷತ್ ಸದಸ್ಯರ ಜತೆ ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ.ಸಂಕನೂರು ಮಂಡಿಸಿದ ನಿಯಮ 72ರ ಗಮನ ಸೆಳೆಯುವ ಸೂಚನೆಗೆ ಬಿ.ಸಿ.ನಾಗೇಶ್ ಉತ್ತರ ನೀಡಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಶೈಕ್ಷಣಿಕ ನಿಯಮ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಅಡಿ ಉಪನ್ಯಾಸಕರ ಕಾರ್ಯಭಾರ ನಿಗದಿಪಡಿಸಿರುವ ಹಿನ್ನೆಲೆ ಉಪನ್ಯಾಸಕರುಗಳಿಗೆ 16/20 ಅವಧಿಗಳ ಕಾರ್ಯಭಾರವನ್ನು ಸರಿದೂಗಿಸುವಂತೆ ಜಿಲ್ಲಾ ಉಪ ನಿರ್ದೇಶಕರುಗಳಿಗೆ ಸೂಚಿಸಲಾಗಿತ್ತು ಎಂದರು.
ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಸಹಾಯಾನುದಾನ ಇತ್ಯಾದಿ) 2006ರ ನಿಯಮ 15, 16 ಮತ್ತು 17ರ ಅನ್ವಯ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸದರಿ ನಿಯಮಗಳನ್ನು ಸರ್ಕಾರದಿಂದ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಿದರು.
ಅದರಂತೆ, ಸರ್ಕಾರದ ಅಧಿಸೂಚನೆ ಮೇಲಿನ ನಿಯಮ 14ಕ್ಕೆ ತಿದ್ದುಪಡಿ ತಂದು ಖಾಸಗಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಷಯಗಳಿಗೆ ವಾರದಲ್ಲಿ ತಲಾ 24 ಗಂಟೆಗಳು ಹಾಗೂ ಕಲಾ, ವಾಣಿಜ್ಯ ಮತ್ತು ಭಾಷಾ ವಿಷಯಗಳಿಗೆ ವಾರದಲ್ಲಿ ತಲಾ 20 ಗಂಟೆಗಳ ಕಾರ್ಯಭಾರ ನಿಗದಿಪಡಿಸಲಾಗಿರುತ್ತದೆ. ಮುಂದುವರೆದು, ಸಾಕಷ್ಟು ಕಾರ್ಯಭಾರ ಇರುವ ಹುದ್ದೆಗಳನ್ನು ಮಾತ್ರ ವೇತನಾನುದಾನಕ್ಕೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.