ದುಬೈ/ಬೆಂಗಳೂರು: ದುಬೈನಲ್ಲಿ ನೆಲೆಸಿರುವ ಅನಿವಾಸಿಯರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ, ಎಲ್ಲಾ ರೀತಿಯ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಹೂಡಿಕೆಗೆ ಆಹ್ವಾನ ನೀಡಿದ್ದಾರೆ.
ದುಬೈನಲ್ಲಿ ಬಸವ ಸಮಿತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಇಂದು ದೇಶದಲ್ಲೇ ಅತ್ಯುತ್ತಮ ಕೈಗಾರಿಕಾ ತಾಣವಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣ, ನಮ್ಮಲ್ಲಿರುವ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ.
ಅನಿವಾಸಿಯರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ ಅಗತ್ಯವಿರುವ ಭೂಮಿ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಾಲಮಿತಿಯೊಳಗೆ ಒದಗಿಸಿ ಕೊಡುವುದಾಗಿ ಆಶ್ವಾಸನೆ ನೀಡಿದರು.
ನಾವು ಜಾರಿಗೆ ತಂದಿರುವ ನೂತನ 'ಕೈಗಾರಿಕಾ ನೀತಿ' ದೇಶಕ್ಕೆ ಮಾದರಿಯಾಗಿದೆ. ಇದರಿಂದ ಆಕರ್ಷಿತರಾಗಿರುವ ಉದ್ಯಮಿಗಳು ಸ್ವಯಂಪ್ರೇರಿತರಾಗಿ ಉದ್ಯಮ ಆರಂಭಿಸಲು ಮುಂದೆ ಬರುತ್ತಿದ್ದಾರೆ. ಇದರಿಂದಾಗಿ ಕೈಗಾರಿಕಾ ವಲಯದಲ್ಲಿ 'ಹೊಸ ಚೈತನ್ಯ' ಕಂಡು ಬಂದಿದೆ. ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ 'ಕೆಂಪು ರತ್ನಗಂಬಳಿ' ಹಾಕಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ 'ದೊಡ್ಡ ಕ್ರಾಂತಿಯನ್ನೇ' ಸೃಷ್ಟಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಆಗಿರುವುದು ಕರ್ನಾಟಕದಲ್ಲಿ. ಈ ಬೆಳವಣಿಗೆ ನಮ್ಮ ರಾಜ್ಯ ಕೈಗಾರಿಕೆಯಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ ಎಂಬುದರ ಮುನ್ಸೂಚನೆ ಎಂದು ಹೇಳಿದರು.