ಬೆಂಗಳೂರು: ಮತ ಕೇಳಲು ಇಲ್ಲಿಗೆ ಯಾರೇ ಬಂದ್ರೂ ಹೊಡೆದೋಡಿಸಿ, ಸಾಯೋತನಕ ಬಿಡಬೇಡಿ ಎಂದು ಕ್ಷೇತ್ರದ ಜನರಿಗೆ ಸಚಿವ ಮುನಿರತ್ನ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿರತ್ನರ ಭಾಷಣದ ವಿಡಿಯೋ ರಿಲೀಸ್ ಮಾಡಿದರು. ಜೊತೆಗೆ ರಾಜರಾಜೇಶ್ವರಿ ಕ್ಷೇತ್ರದ ಖಾತಾನಗರದಲ್ಲಿ ತಮಿಳು ಭಾಷಿಕರು 60-70 ವರ್ಷದಿಂದ ವಾಸವಾಗಿದ್ದಾರೆ. ರಾಜ್ಯದ ಸಚಿವರೊಬ್ಬರು ಮಾರ್ಚ್ 19 ರಂದು ರಾತ್ರಿ 9.30 ಕ್ಕೆ ತಮಿಳಿನಲ್ಲಿ ಮಾತನಾಡುತ್ತಾ, ಈ ಪ್ರದೇಶಕ್ಕೆ ಯಾರೇ ಬಂದರೂ ಹೊಡೆದೋಡಿಸಿ ಎಂದು ಕರೆ ನೀಡಿದ್ದಾರೆ ಎಂದರು.
ಒಕ್ಕಲಿಗರನ್ನು ಗುರಿಯಾಗಿಸಿ ಸಿನಿಮಾ ತೆಗೆಯಲು ಹೊರಟ ವ್ಯಕ್ತಿ ಈಗ ದ್ವೇಷ ಸಾಧಿಸುತ್ತಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಈ ಮಾತು ಹೇಳಿದ್ದಾರೆ. ಕನ್ನಡ ಮತ್ತು ಒಕ್ಕಲಿಗ ಹೆಣ್ಣು ಮಗಳ ವಿರುದ್ಧ ಮಾತನಾಡಿದ್ದಾರೆ. ಒಕ್ಕಲಿಗರ ಹೆಸರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಮುನಿರತ್ನರನ್ನು ಬಂಧಿಸಲಿ ಎಂದ ಸಂಸದರು: ಆರ್.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದರೆ ಇನ್ನೂ ಕ್ರಮ ಆಗಿಲ್ಲ. ನಾವು ಪ್ರೊಟೆಸ್ಟ್ ಮಾಡಿದ್ರೆ, ಹತ್ತಿಕ್ಕುತ್ತಾರೆ. ನಮ್ಮ ಕಾರ್ಯಕರ್ತರ ವಿರುದ್ಧ ಹತ್ತಾರು ಕೇಸ್ ಹಾಕಿದ್ದಾರೆ. ತಕ್ಷಣ ಮುನಿರತ್ನ ಅವರನ್ನು ಬಂಧಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕು. ಪೊಲೀಸರಿಗೆ ನೈತಿಕತೆ ಇದ್ರೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.