ಬೆಂಗಳೂರು :ಚುನಾವಣೆಯಲ್ಲಿ ಸುಧಾರಣೆ ಆಗುತ್ತಿದ್ದರೆ ನಾವು ಅಲ್ಲೇ (ಕಾಂಗ್ರೆಸ್) ಇರುತ್ತಿದ್ದೆವು, ಬಿಜೆಪಿಗೆ ಬರುತ್ತಿರಲಿಲ್ಲ. ಒಂದು ಪಕ್ಷದಲ್ಲಿ ಗೆದ್ದು ಬಂದ ಬಳಿಕ ಆತ ಐದು ವರ್ಷ ಅದೇ ಪಕ್ಷದಲ್ಲಿ ಇರಬೇಕು. ಅವನು ರಾಜೀನಾಮೆ ನೀಡಿದರೆ ಆತ ಮತ್ತೆ ಚುನಾವಣೆಗೇ ನಿಲ್ಲದಂತೆ ಆಗಬೇಕೆಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಆರ್.ವಿ.ದೇಶಾಪಂಡೆ ಮಾತನಾಡುತ್ತಿದ್ದರು. ಇವರ ಮಾತಿನ ಮಧ್ಯೆ ಎದ್ದು ನಿಂತ ಎಂಟಿಬಿ ನಾಗರಾಜ್, ದೇಶಪಾಂಡೆ ಹಿರಿಯ ಸದಸ್ಯರು. 1983ರಲ್ಲಿ ರಾಜಕೀಯವಾಗಿ ಪ್ರವೇಶ ಪಡೆದವರು. ಎಂಟು ಬಾರಿ ಶಾಸಕರಾಗಿ ಆಯ್ಕೆ ಆದವರು. ಇಪ್ಪತ್ತು ವರ್ಷಗಳ ಹಿಂದೆ ಪ್ರಜಾಪ್ರಭುತ್ವದಡಿ ನಡೆದ ಚುನಾವಣೆ ಸ್ವಲ್ಪ ದಕ್ಷ ಹಾಗೂ ಪ್ರಾಮಾಣಿಕವಾಗಿ ನಡೆದಿದೆ ಎಂದರು.
ಅಲ್ಲದೇ, ನಿಮ್ಮ ಕಾಲದಲ್ಲೂ ಹಣ ಬಲ, ತೋಳು ಬಲ ಇದ್ದಿಲ್ಲ. ಚುನಾವಣೆ ಸುಧಾರಣೆ ಮಾಡಬೇಕು. ಒಂದು ಪಕ್ಷದಲ್ಲಿ ಗೆದ್ದು ಬಂದ ಬಳಿಕ ಆತ ಐದು ವರ್ಷ ಅದೇ ಪಕ್ಷದಲ್ಲಿ ಇರಬೇಕು. ಅವನು ರಾಜೀನಾಮೆ ನೀಡಿದರೆ ಆತ ಮತ್ತೆ ಚುನಾವಣೆಗೇ ನಿಲ್ಲಬಾರದು. ಆ ತರ ಬದಲಾವಣೆ ಮಾಡದಿದ್ದರೆ, ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ. ನಾವು ಅಲ್ಲೇ ಇರುತ್ತಿದ್ದೆವು, ನಾವು ಬಿಜೆಪಿಗೆ ಬರುತ್ತಿರಲಿಲ್ಲ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಆರ್.ವಿ.ದೇಶಪಾಂಡೆ, ಎಲ್ಲ ಕಡೆ ಅಸ್ಥಿರತೆಯ ವಾತಾವರಣ ಸೃಷ್ಟಿಯಾಗಿದೆ. ಹಣ, ಅಧಿಕಾರ ಇದಕ್ಕೆ ಬಲಿಯಾಗಿ ಬಹಳಷ್ಟು ಜನ ಪಕ್ಷ ಬಿಡುತ್ತಿದ್ದಾರೆ. ಇದಕ್ಕೆ ನಿರ್ಬಂಧ ಹಾಕಬೇಕು. ಒಮ್ಮೆ ಒಂದು ಪಕ್ಷದಿಂದ ಆರಿಸಿ ಬಂದ ಮೇಲೆ ಅವಧಿ ಇರುವ ತನಕ ಇರಬೇಕು. ರಾಜೀನಾಮೆ ಕೊಟ್ಟ ಬಳಿಕ ಯಾವುದೇ ಬೇರೆ ಪಕ್ಷ ಸೇರಬಾರದು. ಆ ರೀತಿಯ ಸುಧಾರಣೆ ತರಬೇಕು. ಆಗ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಆಗ ಯಾರೂ ಪಕ್ಷಾಂತರ ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಆಗ ಮಧ್ಯಪ್ರವೇಶಿಸಿದ ಸ್ಪೀಕರ್, ಆಯ್ಕೆಯಾದ ಶಾಸಕನಿಗೆ ಪಕ್ಷ ಅಥವಾ ಸರ್ಕಾರದ ಆಡಳಿತ ಒಪ್ಪಿಗೆ ಆಗಿಲ್ಲವಾದರೆ, ಅವನಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ರಾಜೀನಾಮೆ ನೀಡುವ ಸ್ವಾತಂತ್ರ ಇರಬೇಕು. ಆದರೆ, ರಾಜೀನಾಮೆ ಕೊಟ್ಟ ಬಳಿಕ ಆತ ಅದೇ ಅವಧಿಯಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ನಿಲ್ಲಬಾರದು ಎಂಬ ಬಗ್ಗೆ ಸುಧಾರಣೆ ಆಗಬೇಕೆಂದು ಸಲಹೆ ನೀಡಿದರು.
ಮಾತು ಮುಂದುವರಿಸಿದ ದೇಶಪಾಂಡೆ, ನೈತಿಕ ಮಟ್ಟ ಹೆಚ್ಚಿರಬೇಕು. ಜನಪ್ರತಿನಿಧಿಗಳು ನಾವೆಲ್ಲ ಮಾತಿಗೆ ತಕ್ಕಂತೆ ನಡೆಯಬೇಕು. ರಾಜಕೀಯ ಪಕ್ಷದಲ್ಲಿ ಅಸಮಾಧಾನವಾದರೆ, ಶಾಸಕನಿಗೆ ರಾಜೀನಾಮೆ ನೀಡುವ ಅಧಿಕಾರ ಇರಬೇಕು. ಆದರೆ, ರಾಜೀನಾಮೆ ನೀಡಿ ಮತ್ತೊಂದು ರಾಜಕೀಯ ಪಕ್ಷಕ್ಕೆ ಹೋಗುವುದಕ್ಕೆ ಸಂವಿಧಾನ ಅವಕಾಶ ನೀಡಬಾರದು. ಇಲ್ಲವಾದರೆ ಯಾವ ಸರ್ಕಾರವೂ ಉಳಿಯುವುದಿಲ್ಲ. ಸರ್ಕಾರಕ್ಕೆ ಸ್ಥಿರತೆ ಇರಬೇಕು. ಈಗ ಲೆಕ್ಕ ಬಿಟ್ಟು ಪಕ್ಷಗಳು ಬೆಳೆದಿವೆ. ವ್ಯಕ್ತಿಗೊಂದು ಪಕ್ಷ ಇದೆ. ಹಾಗಾಗಿ, ಮತದಾರರು ಸಹ ಹಣದ ಪ್ರಭಾವ, ಮದ್ಯದ ಪ್ರಭಾವಕ್ಕೆ ಬಲಿಯಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ, ಭೀಮನ ಲೆಕ್ಕದ ಸ್ವಾರಸ್ಯಕರ ಚರ್ಚೆ: ವಿಡಿಯೋ