ಬೆಳಗಾವಿ :ಸಚಿವ ಸಂಪುಟ ಮುಖ್ಯಮಂತ್ರಿ ಪರಮಾಧಿಕಾರವಾಗಿದೆ. ನಮ್ಮ ರಾಜ್ಯದ ನಾಯಕರು, ರಾಷ್ಟ್ರೀಯ ವರಿಷ್ಠರು ಸೇರಿ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತಾರೆ. ಸಂಪುಟದಿಂದ ಮುರುಗೇಶ್ ನಿರಾಣಿ ಅವರನ್ನ ಕೈಬಿಡ್ತಾರೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ ನಿರಾಣಿ, ಮಂತ್ರಿ ಆಗ್ಲಿ, ಎಂಎಲ್‌ಎ ಆಗ್ಲಿ ನಮ್ಮ ತಾತನ ಆಸ್ತಿಯಲ್ಲ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 30 ವರ್ಷದಿಂದ ಬಿಜೆಪಿ ಪಕ್ಷದ ಕಾರ್ಯಕರ್ತ ಆಗಿರುವೆ. ನಾಳೆ ಮಂತ್ರಿ ಕೊಟ್ಟರು ಇದರಲ್ಲಿ ಇರ್ತೇವಿ. ಎಂಎಲ್ಎ ಟಿಕೆಟ್ ಕೊಡದಿದ್ದರು ನಾವು ಈ ಪಕ್ಷದಲ್ಲೇ ಇರುತ್ತೇವೆ. ನಾನು ಪಕ್ಷದ ಸಕ್ರಿಯ ಸದಸ್ಯನಾಗಿ ಮುಂದೆ ಬರುವಂತವರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದರು.
ಮೋದಿ, ಬೊಮ್ಮಾಯಿ ಇರುವುದರಿಂದ ಬೆಲೆ ಏರಿಕೆ ಕಂಟ್ರೋಲ್ನಲ್ಲಿದೆ :ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿಯವರು, ಸಿಎಂ ಬೊಮ್ಮಾಯಿ ಅವರು ಇರುವುದರಿಂದ ಬೆಲೆ ಏರಿಕೆ ಕಂಟ್ರೋಲ್ನಲ್ಲಿದೆ. ಮೋದಿ ಪ್ರಧಾನಿ ಆಗಿರದಿದ್ರೆ ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ 200 ರೂಪಾಯಿ ಆಗುತ್ತಿತ್ತು. ಮೋದಿಯವರು ದೂರದೃಷ್ಟಿ ಇಟ್ಟುಕೊಂಡಿದ್ದಾರೆ. ಈಗ ದೇಶದಲ್ಲಿ ಎಥನಾಲ್ ಉತ್ಪಾದನೆ ಹೆಚ್ಚಳ ಮಾಡುತ್ತಿದ್ದಾರೆ. ಎಥನಾಲ್ ರೇಟ್ 60 ರೂ. ಇದ್ದು, ಇದರಿಂದ ಎಥನಾಲ್ ಮತ್ತು ಪೆಟ್ರೋಲ್ ಮಿಕ್ಸ್ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಬೆಲೆ ಏರಿಕೆ ಕಂಟ್ರೋಲ್ ಮಾಡಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ :ಸಚಿವ ಸಂಪುಟ ವಿಚಾರ ಹೊರಗಡೆ ಚರ್ಚೆ ಆಗ್ತಿಲ್ಲ. ಅದು ಮುಖ್ಯಮಂತ್ರಿ ಪರಮಾಧಿಕಾರವಿದೆ. ಈ ಬಗ್ಗೆ ಸಿಎಂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿ ಇತ್ಯರ್ಥ ಮಾಡ್ತಾರೆ. 2023ರಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಬೇಕು. 150 ಸೀಟ್ ಗೆಲ್ಲಿಸುವ ನಿಟ್ಟಿನಲ್ಲಿ ಸ್ಟ್ಯಾಟರ್ಜಿ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಂತ್ರ ಮಾಡಿದ್ದಾರೆ. ಹೀಗಾಗಿ, ಸಂಪುಟದಿಂದ ಯಾರನ್ನ ಬಿಡಬೇಕು, ಸಂಪುಟಕ್ಕೆ ಯಾರನ್ನ ತೆಗೆದುಕೊಳ್ಳಬೇಕು. ಯಾರನ್ನ ಸಂಪುಟದಲ್ಲಿ ಉಳಿಸಿ ಕೊಳ್ಳಬೇಕೆನ್ನುವುದನ್ನ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.