ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರವಿರುವ ಎನ್‌ಜಿಇಎಫ್‌ಗೆ ಸೇರಿದ 105 ಎಕರೆ ಜಾಗವನ್ನು ಹಾಗೆಯೇ ಉಳಿಸಿಕೊಂಡು, 30 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಆಕರ್ಷಕ ವೃಕ್ಷೋದ್ಯಾನ (ಟ್ರೀ ಪಾರ್ಕ್) ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ನಗರದಲ್ಲಿ ಹಸಿರನ್ನು ಉಳಿಸಿಕೊಂಡು, ಇದನ್ನು ಮನೋಹರವಾದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ನಗರದ ಖನಿಜ ಭವನದಲ್ಲಿ ಈ ಸಂಬಂಧ ಇಂದು ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಪ್ರಾಥಮಿಕ ಸುತ್ತಿನ ಸಭೆ ನಡೆಸಿದ ಅವರು ಈ ವಿಷಯ ತಿಳಿಸಿದರು. ಜೊತೆಗೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: Indira Canteen: ಇಂದಿರಾ ಕ್ಯಾಂಟೀನ್ ಮೆನುಗೆ 4 ಹೊಸ ಆಹಾರ ಸೇರ್ಪಡೆ; ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯ
ಎನ್‌ಜಿಇಎಫ್‌ಗೆ ಸೇರಿದ ಜಾಗದ ಪೈಕಿ 70 ಎಕರೆಯಲ್ಲಿ ದಟ್ಟ ಹಸಿರಿದ್ದು, ನಾನಾ ಪ್ರಭೇದಗಳ ಸಾವಿರಾರು ವೃಕ್ಷಗಳಿವೆ. ಜತೆಗೆ 5 ಕೈಗಾರಿಕಾ ಶೆಡ್‌ಗಳಿವೆ. ಇವುಗಳ ಪೈಕಿ ಒಂದು ಮಾತ್ರ ಶಿಥಿಲವಾಗಿದೆ. ಮಿಕ್ಕವನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. 'ಹಂತ-1ಎ'ಯಲ್ಲಿ 11 ಕೋಟಿ ರೂ ಮತ್ತು 'ಹಂತ-1ಬಿ'ನಲ್ಲಿ 15 ಕೋಟಿ ರೂ. ವೆಚ್ಚ ಮಾಡಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ವೈ-ಫೈ ಸೌಲಭ್ಯದೊಂದಿಗೆ 'ರೆಡಿಮೇಡ್ ವರ್ಕ್‌ಸ್ಪೇಸ್' ಕೂಡ ಇರಲಿದೆ. ಬಳಿಕ ಹಂತ-2ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.