ಬೆಂಗಳೂರು: ಭಾರತೀಯ ಮೂಲದ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಹೊಸ ಸಂಸ್ಥೆಯನ್ನು ನೋಂದಾಯಿಸಲು ಎದುರಿಸುತ್ತಿರುವ ಸಂಕಷ್ಟವನ್ನು ಹಂಚಿಕೊಂಡು, ಅಮೆರಿಕಕ್ಕೆ ಮರುಳುವುದಾಗಿ ಹೇಳಿ ಟ್ವಿಟರ್‌ನಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ಸದ್ಯ ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಸಮಸ್ಯೆ ಬಗೆಹರಿಸುವುದಾಗಿ ಉದ್ಯಮಿಗೆ ಭರವಸೆ ನೀಡಿದ್ದಾರೆ.
ಈ ಕುರಿತು ಸಚಿವ ಎಂ ಬಿ ಪಾಟೀಲ್, " ನಿಮ್ಮ ಈ ಸಮಸ್ಯೆಗಾಗಿ ಕ್ಷಮೆಯಾಚಿಸುತ್ತೇನೆ. ಕಂಪನಿಯ ಸ್ಥಾಪನೆಯನ್ನು ಸಾಮಾನ್ಯವಾಗಿ ಸಿಎಗಳು ಮಾಡುತ್ತಾರೆ ಮತ್ತು ಅದಕ್ಕೆ ಆರ್ಒಸಿ ನಿಂದ ಅನುಮೋದನೆ ಪಡೆಯಲು 15-20 ದಿನಗಳಿಗಿಂತ ಹೆಚ್ಚು ತೆಗೆದುಕೊಳ್ಳಬಾರದು. (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಹಾಗೂ ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ) ನಿಮಗೆ ಏನಾದರೂ ಸಮಸ್ಯೆಯಿದ್ದರೆ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಅದನ್ನು ಬಗೆಹರಿಸಲು ಸಂತೋಷಪಡುತ್ತೇನೆ” ಎಂದು ಉದ್ಯಮಿ ಬ್ರಿಜ್ ಸಿಂಗ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಸಚಿವರ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿರುವ ಉದ್ಯಮಿ ಬ್ರಿಜ್ ಸಿಂಗ್, " ನನ್ನ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ನಿಮ್ಮನ್ನು ಶ್ಲಾಘಿಸುತ್ತೇನೆ. ನಿಮ್ಮ ಟ್ವೀಟ್ ನನಗೆ ಹೆಚ್ಚು ಆತ್ಮವಿಶ್ವಾಸ ನೀಡಿದೆ. ಅಗತ್ಯವಿದ್ದರೆ ನಿಮ್ಮ ತಂಡವನ್ನು ನಾನು ಭೇಟಿಯಾಗುವೆ. ನಿಮ್ಮ ಬೆಂಬಲಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ" ಎಂದು ರಿಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸಂಸ್ಥೆಯನ್ನು ನೋಂದಾಯಿಸಲು ಆಗದ್ದಕ್ಕೆ ಅಸಮಾಧಾನಗೊಂಡಿದ್ದ ಉದ್ಯಮಿ:ಎರಡು ತಿಂಗಳು ಕಳೆದರೂ ತಮ್ಮ ಹೊಸ ಸಂಸ್ಥೆಯನ್ನು ನೋಂದಾಯಿಸಲು ಆಗದಿದ್ದ ಕಾರಣಕ್ಕೆ, ಭಾರತೀಯ ಮೂಲದ ಉದ್ಯಮಿ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿ ಅಮೆರಿಕಾಗೆ ವಾಪಸ್ ಹೋಗುವುದಾಗಿ ತಿಳಿಸಿದ್ದರು. ಈ ಕುರಿತು ಗುರುವಾರ ಟ್ವಿಟ್ ಮಾಡಿದ್ದ ಉದ್ಯಮಿ ಬ್ರಿಜ್ ಸಿಂಗ್ "ಎರಡು ತಿಂಗಳು ಕಳೆದರೂ ಬೆಂಗಳೂರಲ್ಲಿ ನನ್ನ ಹೊಸ ಕಂಪನಿ ನೋಂದಣಿ ಮಾಡಲು ಆಗಲಿಲ್ಲ. ಭಾರವಾದ ಹೃದಯದಿಂದ ಅಮೆರಿಕಕ್ಕೆ ವಾಪಸ್ ಹೋಗುತ್ತಿದ್ದೇನೆ" ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದರು.