ಕರ್ನಾಟಕ

karnataka

ETV Bharat / state

ಸ್ಮೃತಿ ಇರಾನಿ ಭೇಟಿಯಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆಗೆ ಮನವಿ

ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಕುರಿತಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿದರು.

ಸ್ಮೃತಿ ಇರಾನಿ ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸ್ಮೃತಿ ಇರಾನಿ ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

By ETV Bharat Karnataka Team

Published : Dec 19, 2023, 8:36 PM IST

ನವದೆಹಲಿ/ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಕುರಿತಂತೆ ಸುದೀರ್ಘವಾಗಿ ಮಾತುಕತೆ ನಡೆಸಿದರು.

ಕೇಂದ್ರ ಪುರಸ್ಕೃತ ಯೋಜನೆಗಳಾದ ಸಖಿ ಒನ್ ಸ್ಟಾಪ್ ಸೆಂಟರ್, ಸಖಿ ನಿವಾಸ್, ಶಕ್ತಿ ಸದನ್, ಉಜ್ವಲ್ ಹಾಗೂ ಸ್ವಾಧಾರ ಗೃಹ ಯೋಜನೆಗಳ ಅನುದಾನ ಬಿಡುಗಡೆಗೊಳಿಸುವಂತೆ ವಿನಂತಿಸಿದರು. ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳಿಗೆ ನೀಡಬೇಕಿರುವ ಅಕ್ಕಿ ಮತ್ತು ಗೋದಿ ಕಳೆದ ಒಂದು ವರ್ಷದಿಂದ ಬಿಡುಗಡೆಯಾಗದೆ ಬಾಕಿ ಉಳಿದಿರುವ ಕುರಿತು ಸಹ ಕೇಂದ್ರ ಸಚಿವರ ಗಮನ ಸೆಳೆದ ಲಕ್ಷ್ಮಿ ಹೆಬ್ಬಾಳ್ಕರ್​​, ಕೂಡಲೇ ಬಿಡುಗಡೆಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಕೋರಿದರು.

ಜೊತೆಗೆ, ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 51 ತಾಲೂಕುಗಳಿಗೆ ಶಿಶು ಅಭಿವೃದ್ಧಿ ಕಚೇರಿ ಮಂಜೂರು ಮಾಡುವಂತೆ ಮತ್ತು ಸಿಬ್ಬಂದಿ ನೀಡುವಂತೆ ಹಾಗೂ ಸಕ್ಷಮ್ ಯೋಜನೆಯಡಿಯ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ ಕ್ಲಾಸ್ ರೂಂ ಆಗಿ ಪರಿವರ್ತಿಸಲು ಸಹ ಲಕ್ಷ್ಮಿ ಹೆಬ್ಬಾಳಕರ್ ಸ್ಮೃತಿ ಇರಾನಿ ಬಳಿ ಮನವಿ ಮಾಡಿದರು.

ಲಕ್ಷ್ಮಿ ಹೆಬ್ಬಾಳಕರ್ ಅವರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ಮೃತಿ ಇರಾನಿ, ತಕ್ಷಣ ಎಲ್ಲವುಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಮತ್ತು ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜೆ.ಸಿ.ಪ್ರಕಾಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಈ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: 12,577.86 ಕೋಟಿ ತುರ್ತು ಬರ ಪರಿಹಾರಕ್ಕೆ ಮನವಿ

ತುರ್ತು ಬರ ಪರಿಹಾರಕ್ಕೆ ಮನವಿ: ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, 12,577.86 ಕೋಟಿ ರೂ. ತುರ್ತು ಪರಿಹಾರ ಬಿಡುಗಡೆಗೊಳಿಸುವಂತೆ ಕೋರಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆಗೂಡಿ ಪ್ರಧಾನಿ ಭೇಟಿಯಾದ ಸಿಎಂ ಸಿದ್ದರಾಮಯ್ಯ, ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಿದರು. ರಾಜ್ಯದಲ್ಲಿ 236 ರಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು. ಎನ್‌.ಡಿ.ಆರ್‌.ಎಫ್. ನಿಂದ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದರು.

ABOUT THE AUTHOR

...view details