ಕರ್ನಾಟಕ

karnataka

ETV Bharat / state

ಹಗ್ಗ ಹರಿಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ.. ಮುಷ್ಕರದ ನಡುವೆ ಸರ್ಕಾರದಿಂದ ಪರ್ಯಾಯ ವ್ಯವಸ್ಥೆಯ ಅಸ್ತ್ರ..

ಕೆಲವರ ಚಿತಾವಣೆಯಿಂದ ಈ ಮುಷ್ಕರ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಕೋವಿಡ್ ಸಮಯದಲ್ಲಿ ಸರೆಂಡರ್ ಮಾಡಿದ ಖಾಸಗಿ ನೋಂದಾಯಿತ ಪ್ರಯಾಣಿಕ ವರ್ಗದ ವಾಹನಗಳಿಗೆ ಏಪ್ರಿಲ್ ತಿಂಗಳಿಗೆ ಅನ್ವಯಿಸುವಂತೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ..

Minister Lakshman Savadi
ಸಾರಿಗೆ ಸಚಿವ ಲಕ್ಷ್ಮಣ ಸವದಿ

By

Published : Apr 7, 2021, 8:15 PM IST

ಬೆಂಗಳೂರು :ಸಾರಿಗೆ ನೌಕರರು 9 ಬೇಡಿಕೆಗಳನ್ನ ಮುಂದಿಟ್ಟು ಈ ಹಿಂದೆ ಮುಷ್ಕರ ನಡೆಸಿದ್ದರು. ಸರ್ಕಾರ ಅದರಲ್ಲಿ ಈಗಾಗಲೇ 8 ಬೇಡಿಕೆ ಈಡೇರಿಸಿದ್ದರೂ ಸಹ ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಮುಷ್ಕರ ಪ್ರಾರಂಭಿಸಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಾಳೆಯೂ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಕೈಗೊಂಡಿರುವುದು ದುರ್ದೈವದ ಸಂಗತಿ. ಆದರೆ, ಮುಷ್ಕರದಿಂದ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಸರ್ಕಾರವು ಹಲವು ರೀತಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಎಂ, ಈಗಾಗಲೇ ತಿಳಿಸಿರುವಂತೆ ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ಅನುಮತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಈ ಬಗ್ಗೆ ಅನುಮತಿ ನೀಡಿದಲ್ಲಿ, ಈ ಬಗ್ಗೆ ಮುಂದಿನ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪರ್ಯಾಯ ವ್ಯವಸ್ಥೆ :ಕೆಲವರ ಚಿತಾವಣೆಯಿಂದ ಈ ಮುಷ್ಕರ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಕೋವಿಡ್ ಸಮಯದಲ್ಲಿ ಸರೆಂಡರ್ ಮಾಡಿದ ಖಾಸಗಿ ನೋಂದಾಯಿತ ಪ್ರಯಾಣಿಕ ವರ್ಗದ ವಾಹನಗಳಿಗೆ ಏಪ್ರಿಲ್ ತಿಂಗಳಿಗೆ ಅನ್ವಯಿಸುವಂತೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಈ ಮುಷ್ಕರದ ಹಿನ್ನೆಲೆ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸುವ ಸಲುವಾಗಿ ಖಾಸಗಿ ವಾಹನಗಳ ಮುಖಾಂತರ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(3)(ಎಫ್)ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಾರಿಗೆ ಪ್ರಯಾಣಿಕರ ವಾಹನಗಳಿಗೆ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(1)ರಂತೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

• ಇಡೀ ರಾಜ್ಯದಲ್ಲಿ ಖಾಸಗಿ ಟ್ಯಾಕ್ಸಿ, ಮಿನಿ ಬಸ್, ಬಸ್ ಮಾಲೀಕರ ಸಂಘದೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಒದಗಿಸುವಂತೆ ಕೋರಲಾಗಿದೆ.
• ಸಾರಿಗೆ ನಿಗಮಗಳ ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಈ ಖಾಸಗಿ ಬಸ್‌ಗಳ ನಿಲುಗಡೆಗಾಗಿ ಸ್ಥಳಾವಕಾಶ ಮತ್ತು ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ಅವಕಾಶ ಒದಗಿಸಲಾಗಿದೆ.
• ದೂರದ ಸ್ಥಳಗಳಿಗೆ ತೆರಳಲಿರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶಗಳಿಂದ ಬೆಂಗಳೂರಿನಿಂದ ಬೆಳಗಾವಿ, ಕಲಬುರಗಿ, ಬೀದರ್, ಕಾರವಾರ, ವಿಜಯಪುರ, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಗೆ ಹೆಚ್ಚಿನ ರೈಲು ಸಂಪರ್ಕ ಒದಗಿಸುವಂತೆ ಈಗಾಗಲೇ ರೈಲ್ವೆ ಇಲಾಖೆಯನ್ನು ಸಹ ಕೋರಲಾಗಿದೆ.
• ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ರೈಲುಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ಇಂತಹ ಸಂಕಷ್ಟದ ಸಮಯದಲ್ಲಿ ಸಹಕರಿಸಬೇಕೆಂದು ಕೋರಲಾಗಿದೆ. ನಮ್ಮ ಸಾರಿಗೆ ನಿಗಮಗಳ ನೌಕರರು ಮುಷ್ಕರವನ್ನು ಕೈಬಿಟ್ಟು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಸವದಿ ಅವರು ಮತ್ತೊಮ್ಮೆ ವಿನಂತಿಸಿಕೊಂಡಿದ್ದಾರೆ.

ABOUT THE AUTHOR

...view details