ಬೆಂಗಳೂರು:ರಾಜ್ಯದಲ್ಲಿ ಇನ್ನೂ ಕೋವಿಡ್ ಹರಡುತ್ತಲೇ ಇದೆ. ಹಾಗಾಗಿ ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಬೇಡ ಅನ್ನೋದು ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯವಾಗಿದೆ. ಜೊತೆಗೆ ಆತಂಕವೂ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಮನವಿ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವ ಸುಳಿವನ್ನು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧವಿದೆ. ಆದರೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಮುಂದೂಡಬೇಕೆಂದು ಮನವಿ ಮಾಡುತ್ತಿವೆ. ಕೋವಿಡ್ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸರಿಯೇ ಎಂಬ ಪ್ರಶ್ನೆ ಮಾಡುತ್ತಿದ್ದಾರೆ ಎಂದರು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಚುನಾವಣೆ ಮುಂದೂಡುವುದು ಸರಿಯಾದ ಕ್ರಮ ಎಂದು ಹೇಳಿದರು.
ದೆಹಲಿ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲೂ ಕೊರೊನಾ ಮೂರನೇ ಅಲೆ ಸೃಷ್ಟಿಯಾಗಬಹುದೆಂದು ತಜ್ಞರು ಹೇಳುತ್ತಿದ್ದಾರೆ. ಒಂದೊಂದು ಗ್ರಾಮದಲ್ಲಿ ನಾಲ್ಕೈದು ಜನ ಸ್ಪರ್ಧೆ ಮಾಡುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹೈಕೋರ್ಟ್ ಮೂರು ವಾರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಬೇಕೆಂದು ಸ್ಪಷ್ಟವಾಗಿ ಆದೇಶ ನೀಡಿದೆ. ಆಯೋಗಕ್ಕೆ ಬೇಕಾಗಿರುವ ಸವಲತ್ತುಗಳನ್ನು ನೀಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ಹೀಗಾಗಿ ನಾವೂ ಕೂಡ ಏನೂ ಮಾಡದಂತಹ ಸ್ಥಿತಿಯಲ್ಲಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹೈಕೋರ್ಟ್ ತೀರ್ಪು ನೀಡಿರುವುದನ್ನು ಯಾರಾದರೂ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದರೆ ಮಾತ್ರ ಚುನಾವಣೆಗೆ ತಡೆಯಾಜ್ಞೆ ತರಬಹುದು. ಅದನ್ನು ಹೊರತುಪಡಿಸಿದರೆ ಸರ್ಕಾರ ಚುನಾವಣೆ ನಡೆಸಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿದೆ. ಬಿಹಾರ, ಶಿರಾ, ಆರ್.ಆರ್.ನಗರದ ಚುನಾವಣೆಯಲ್ಲಿ ಮತದಾನ ಸುರಕ್ಷಿತವಾಗಿದೆ ಎಂದು ಅಂದುಕೊಂಡರೂ ನಂತರ ಕೋವಿಡ್ ಬಂದಿರುವುದನ್ನು ಎಲ್ಲರೂ ಗಮನಿಸಬೇಕು. ನಾವು ಚುನಾವಣೆ ಮುಂದೂಡಬೇಕೆಂಬ ಭ್ರಮೆಯಲ್ಲಿ ಇಲ್ಲ. ಇದು ಸೂಕ್ತವಾದ ಸಮಯವಲ್ಲ ಎಂಬುದೇ ನಮ್ಮ ಮನವಿ. ಆಯೋಗ ಯಾವಾಗ ಬೇಕಾದರೂ ದಿನಾಂಕ ಘೋಷಣೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸಚಿವರು ಹೇಳಿದರು.
ಇನ್ನು ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಈ ಗೊಂದಲ ಸಿಎಂ ದೆಹಲಿಯಿಂದ ವಾಪಸ್ ಬಂದ ನಂತರ ಗೊತ್ತಾಗಲಿದೆ. ಈ ಬಗ್ಗೆ ಸಿಎಂ ನಮ್ಮೊಂದಿಗೆ ಯಾವ ಚರ್ಚೆಯೂ ಮಾಡಿಲ್ಲ. ಹಿರಿಯ ಸಚಿವರನ್ನು ಕೈ ಬಿಡಬೇಕು ಎಂಬ ಯಾವ ಸೂಚನೆಯೂ ಇಲ್ಲ. ಅಚ್ಚರಿಯ ವ್ಯಕ್ತಿಗಳ ಆಯ್ಕೆ ಅಂದರೆ ಯಾರನ್ನೇ ಮಾಡಿದ್ರೂ ಕೂಡ ಎಂಎಲ್ಎ, ಎಂಎಲ್ಸಿಗಳನ್ನೇ ಮಾಡಬೇಕು ಎಂದು ನಗೆ ಚಟಾಕಿ ಹಾರಿಸಿದರು.