ಬೆಂಗಳೂರು :ಜಲಜೀವನ್ ಮಿಷನ್-ಮನೆಮನೆಗೂ ಗಂಗೆ ಯೋಜನೆ ಅನುಷ್ಠಾನದಲ್ಲಿ ದಾಪುಗಾಲು ಇಟ್ಟಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದೇ ಬಾರಿಗೆ 16 ಯೋಜನೆಗಳಿಗೆ ಅನುಮೋದನೆ ಪಡೆದು ದಾಖಲೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಮನೆ ಮನೆಗೂ ಗಂಗೆ (ಜಲಜೀವನ ಮಿಷನ್) ಕರ್ನಾಟಕ ರಾಜ್ಯದಲ್ಲಿ ಅತಿ ವೇಗವಾಗಿ ಅನುಷ್ಠಾನಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಒಂದೇ ಬಾರಿಗೆ ಹದಿನಾರು ಯೋಜನೆಗಳಿಗೆ ಅನುಮೋದನೆ ಪಡೆದಿದೆ. ಇದರಿಂದಾಗಿ 6,357 ಹಳ್ಳಿಗಳ 6,17,607 ಮನೆಗಳಿಗೆ ಕೊಳಾಯಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಈವರೆಗೆ ಒಟ್ಟು 45.44 ಲಕ್ಷ ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದೆ. ಕೇವಲ 2020-21ರಲ್ಲಿ 3.43ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ದೊರೆತಿದೆ ಎಂದು ಮಾಹಿತಿ ನೀಡಿದರು.
2021-22ರಲ್ಲಿ 25.17 ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 17.60 ಲಕ್ಷ ಕುಟುಂಬಗಳಿಗೆ ಮನೆಯಲ್ಲಿ ಕೋಳಾಯಿ ಸಂಪರ್ಕ ನೀಡಲಾಗಿದೆ. 2022-23ರಲ್ಲಿ 27.14 ಲಕ್ಷ ಮತ್ತು 23-24ರಲ್ಲಿ 17.45 ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸಿ, ಇಡೀ ರಾಜ್ಯದ 97.91 ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು ಎಂದರು.
ನರೇಗಾದಲ್ಲೂ ಸಾಧನೆ :ಮಹಾತ್ಮ ಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನಲ್ಲೂ ಸಾಧನೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಮೋದಿಸಿದ್ದ 13 ಕೋಟಿ ಮಾನವ ದಿನಗಳನ್ನು ಡಿಸಂಬರ್ ತಿಂಗಳಿನಲ್ಲಿಯೇ ಪೂರ್ಣಗೊಳಿಸಿದ ತರುವಾಯ ಮತ್ತೆ 1.40 ಕೋಟಿ ಮಾನವ ದಿನಗಳ ಹೆಚ್ಚುವರಿ ಉದ್ಯೋಗ ನೀಡಲು ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ. 715 ಕೋಟಿ ಅನುದಾನ ಲಭ್ಯವಾಯಿತು.