ಬೆಂಗಳೂರು :ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುವ ರೀತಿ ಸಮುದಾಯದ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಕರೆ ನೀಡಿದ್ದಾರೆ.
ಎಸ್ಟಿಗೆ ಸೇರಿಸಲು ಕುರುಬ ಸಮುದಾಯ ಬೇಡಿಕೆ.. ಸಚಿವ ಈಶ್ವರಪ್ಪ ಹೀಗಂದರು.. ಕೆ ಎಸ್ ಈಶ್ವರಪ್ಪರವರ ಮನೆಯಲ್ಲಿ 4 ಮಠದ ಸ್ವಾಮೀಜಿಗಳು ಮತ್ತು ಕುರುಬ ಸಮುದಾಯದ ಸರ್ವ ಪಕ್ಷದ ನಾಯಕರುಗಳ ನೇತೃತ್ವದಲ್ಲಿ ಕುರುಬರ ಎಸ್ಟಿ ಹೋರಾಟದ ರೂಪುರೇಷೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಹಿಂದುಳಿದ ವರ್ಗಗಳ ಇಲಾಖೆಯಿಂದ ಜಾತಿ ಜನಗಣತಿ ವರದಿ ಮಂಡನೆಗಾಗಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಜೊತೆ ಸಭೆ ಮಾಡಬೇಕು. ಅಂತಿಮವಾಗಿ ಎಲ್ಲರೂ ಚರ್ಚಿಸಿ ಸಿಎಂ ಭೇಟಿ ಮಾಡಬೇಕು. ಅಲ್ಲಿ ವರದಿ ಮಂಡನೆಗೆ ಒತ್ತಾಯವನ್ನು ಶೀಘ್ರದಲ್ಲೇ ನಾವು ಮಾಡಬೇಕು ಎಂದರು.
ವರದಿ ಯಾಕೆ ಮಂಡನೆಯಾಗಿಲ್ಲ ಎಂಬ ಚರ್ಚೆ ಬೇಡ:ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವರದಿ ಸಿದ್ದವಾದರೂ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮಂಡನೆಯಾಗಲಿಲ್ಲ. ಆದರೆ, ಈ ಸರ್ಕಾರದಲ್ಲಿ ಅದು ಮಂಡನೆಯಾಗಬೇಕು. ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು. ಜಾತಿ ಜನಗಣತಿ ವರದಿ ಮಂಡಿಸಿದ್ರೆ ಯಾವ ಯಾವ ಸಮುದಾಯ ಎಷ್ಟೆಷ್ಟು ಜನಸಂಖ್ಯೆ ಹೊಂದಿದೆ ಎನ್ನುವುದು ಗೊತ್ತಾಗಲಿದೆ. ಹಾಗಾಗಿ, ಶೀಘ್ರವೇ ಜಾತಿಗಣತಿ ವರದಿ ಮಂಡಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ನಾವು ಒಂದಾಗಬೇಕು ಎಂದರು.
ವಾಲ್ಮೀಕಿ ಹೋರಾಟ ಸ್ಫೂರ್ತಿಯಾಯ್ತಾ?:ವಾಲ್ಮೀಕಿ ಸಮುದಾಯ ವೀಸಲಾತಿ ಹೆಚ್ಚಳಕ್ಕಾಗಿ ನಡೆಸುತ್ತಿರುವ ಹೋರಾಟ, ಸ್ವಾಮೀಜಿಗಳ ನೇತೃತ್ವದ ಪಾದಯಾತ್ರೆ ಫಲವಾಗಿ ಅವರ ಬೇಡಿಕೆ ಈಡೇರಿಕೆಯಾಗುವ ಹಂತ ತಲುಪಿದೆ. ಹಾಗಾಗಿ, ಅದೇ ಮಾದರಿ ಸಂಘಟಿತರಾಗಿ ಸ್ವಾಮೀಜಿಗಳ ನೇತೃತ್ವದಲ್ಲಿಯೇ ಹೋರಾಟ ನಡೆಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು ಎನ್ನಲಾಗಿದೆ. ಸಮುದಾಯದ ಶಕ್ತಿ ಪ್ರದರ್ಶನ ಮಾಡುವ ಮೂಲಕ ಮೀಸಲಾತಿ ಪಡೆಯಲು, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ನಿರಂಜನಾನಂದ ಸ್ವಾಮೀಜಿಗಳು, ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಅಮರೇಶ್ವರ ಮಹಾರಾಜರು, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ರಘುನಾಥ್ ಮಲ್ಕಾಪುರೆ, ಮಾಜಿ ಸಚಿವ ಹೆಚ್ ಎಂ ರೇವಣ್ಣ, ವಿಧಾನಪರಿಷತ್ ಸದಸ್ಯರುಗಳಾದ ಎಂಟಿಬಿ ನಾಗರಾಜ್, ಆರ್ ಶಂಕರ್. ಮಾಜಿ ಮೇಯರ್‌ಗಳಾದ ವೆಂಕಟೇಶ್‌ಮೂರ್ತಿ, ರಾಮಚಂದ್ರಪ್ಪ, ಮುಕುಡಪ್ಪ ಸೇರಿ 100ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು.