ಬೆಂಗಳೂರು:ಲಿಂಗಾಯತ ಶಾಸಕರೇ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಟ್ಟಾಗ ಸ್ವಾಮೀಜಿಗಳು ಯಾಕೆ ಕರೆದು ಬುದ್ದಿ ಹೇಳಲಿಲ್ಲ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೆಳಗಿಳಿದ್ರೆ ಬಿಜೆಪಿ ಸರ್ವನಾಶ ಎಂದಿದ್ದ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ವಿರುದ್ದ ಮಾತನಾಡಿದವರು ಯಾರು?. ಲಿಂಗಾಯತ ಶಾಸಕರೇ ಅಲ್ವಾ?. ಆಗ ಯಾಕೆ ಈ ಸ್ವಾಮೀಜಿಗಳು ಆ ಶಾಸಕರಿಗೆ ಬುದ್ದಿ ಹೇಳಲಿಲ್ಲ. ಈಗ ಸ್ವಾಮೀಜಿಗಳು ಬಂದು ಪಕ್ಷ ಸರ್ವನಾಶ ಆಗತ್ತೆ ಅಂತಿದ್ದಾರೆ ಎಂದು ಕಿಡಿ ಕಾರಿದರು.
ಯಡಿಯೂರಪ್ಪ ಅವರ ನಿರ್ಧಾರ ಹಾಗು ಹೇಳಿಕೆ ನನಗೆ ಸಮಧಾನ ಹಾಗು ಖುಷಿ ತಂದಿದೆ. ಇದುವರೆಗೆ ಅವರು ರಾಜೀನಾಮೆ ಕೊಡ್ತಾರೆ ಅಂತ ಯಾರೂ ಹೇಳಿಲ್ಲ. ಅದನ್ನು ನೀವೂ ಚರ್ಚೆ ಮಾಡಬೇಡಿ, ನಾನೂ ಮಾಡಲ್ಲ. ಅದು ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವಿನ ವಿಚಾರ. ಅದನ್ನು ಅವರಿಬ್ಬರೇ ನಿರ್ಧಾರ ಮಾಡ್ತಾರೆ. ಅವರು ಇರ್ತಾರೋ ಬಿಡ್ತಾರೋ ಅದೆಲ್ಲ ಮುಂದಿನ ವಿಚಾರ. ಆ ಬಗ್ಗೆ ಮಾತನಾಡಲು ನಾವು, ನೀವು ಯಾರು?. ಆದರೆ ಯಡಿಯೂರಪ್ಪ ಹೇಳಿದ ಮಾತು ಸರಿಯಾಗಿದೆ ಎಂದರು.
ಯಡಿಯೂರಪ್ಪ ಕೆಜೆಪಿಗೆ ಹೋಗಿದ್ದರು. ಜತೆಗೆ ಇದ್ದವರೇ ಹಾಳು ಮಾಡಿದ್ದಾರೆ ಎಂದು ನನ್ನ ಬಳಿ ಅವರೇ ಹೇಳಿದ್ದರು. ಬಿಜೆಪಿಗೆ ವಾಪಸ್ ಬರ್ತೇನೆ. ವಾಪಸ್ ಬಂದು ಪಕ್ಷ ಕಟ್ಟೋಣ ಎಂದು ಹೇಳಿದ್ದರು. ಆ ಮೂಲಕ ರೈತರ ಅಭಿವೃದ್ಧಿ ಮಾಡೋಣ ಎಂದಿದ್ದರು. ರೈತ ರೈತ ರೈತ ಅಂತ ಜಪ ಮಾಡೋದು ದೇವೇಗೌಡರನ್ನು ಬಿಟ್ಟರೆ ಯಡಿಯೂರಪ್ಪ ಮಾತ್ರ. ಅವರು ನಾಲ್ಕು ಮಂದಿ ಶಾಸಕರಿದ್ದಾಗಿನಿಂದ ಪಕ್ಷ ಕಟ್ಟಿ ಬೆಳೆಸಿದವರು ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ನಿರ್ನಾಮ: ಬಸವಪ್ರಕಾಶ ಸ್ವಾಮೀಜಿ Warning