ಬೆಂಗಳೂರು: ಮಂಗನ ಕಾಯಿಲೆ ಹರಡದಂತೆ ಹೆಚ್ಚಿನ ಗಮನ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಉಲ್ಬಣಗೊಂಡಿರುವ ಮಂಗನ ಕಾಯಿಲೆ ಬಗ್ಗೆ ಇವತ್ತು ಉನ್ನತ ಮಟ್ಟದ ಸಭೆ ನಡೆಸಿದ್ದೇನೆ. ಶಿವಮೊಗ್ಗ, ಸಾಗರ, ಸೊರಬ, ತೀರ್ಥಹಳ್ಳಿ ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ್ದು, ಈ ಭಾಗದ ಜನಪ್ರತಿನಿಧಿಗಳಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.