ಬೆಂಗಳೂರು : ಶಕ್ತಿ ಯೋಜನೆಯಿಂದ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಮೌನಕ್ರಾಂತಿ ಹೆಚ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಜನ ಬಸ್ಗಳಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ. ಪ್ರವಾಸೋದ್ಯಮ ಹೆಚ್ಚಾಗುತ್ತಿದೆ. ಮಹಿಳೆಯರು ಮಾತ್ರವಲ್ಲ, ಪುರುಷ ಪ್ರಯಾಣಿಕರು ಹೆಚ್ಚಾಗಿದ್ದಾರೆ . ಶೇ. 20 ರಿಂದ 30 ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಬಂದಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರ ಹೆಚ್ಚಳದಿಂದ ಸಾರಿಗೆ ನಿಗಮ ಸ್ವಾವಲಂಬಿ ಆಗುತ್ತದೆ. ಇಂದು ಸಾರಿಗೆ ಸಂಸ್ಥೆ ಹೊಸ ವಾಹನ ಖರೀದಿಗೆ, ವಾಹನ ಇದುವರೆಗೂ ತಲುಪದ ಹಳ್ಳಿಗಳಿಗೆ ಬಸ್ ತಲುಪಿಸಬಹುದು. ಉತ್ತಮ ವೇತನ ನೀಡಬಹುದು. ಇದುವರೆಗೂ ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಿ ಇರಬೇಕಿತ್ತು. ಆದರೆ, ಈಗ ಸರ್ಕಾರದ ಕಡೆ ನೋಡಬೇಕಿಲ್ಲ. ನಾಲ್ಕೂ ನಿಗಮಗಳು ಲಾಭಕ್ಕೆ ಬಂದಿದೆ. ಇದರಿಂದ ಶಕ್ತಿ ಯೋಜನೆ ನಷ್ಟವಲ್ಲ, ಲಾಭದ ಹಳಿಗೆ ಬಂದಿದೆ ಎಂದರು.
ಬಡವರ ಬಗ್ಗೆ ಇಷ್ಟು ಅಸಡ್ಡೆ ಬೇಡ: ಹೊಟ್ಟೆ ತುಂಬಿದವರು, ಹಸಿದವರ ಬಗ್ಗೆ ಅಸಡ್ಡೆಯಿಂದ ಮಾತನಾಡುವುದು ಸಾಮಾನ್ಯ. ಶ್ರೀಮಂತರ ಸಾಲ ಮನ್ನಾ ಮಾಡಿದರೆ ಸರಿ, ಬಡವರಿಗೆ ಅನ್ನ ಕೊಟ್ಟರೆ ಅದಕ್ಕೆ ಆಕ್ರೋಶ. ಬಡವರ ಬಗ್ಗೆ ಯಾಕೆ ಸಿಟ್ಟು. ಶ್ರೀಮಂತರ ಸಾಲ ಮನ್ನಾ ಮಾಡಿದಾಗ ಆಕ್ರೋಶ ಯಾಕೆ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹಾಗೂ ಇತರ ಸದಸ್ಯರು ಹಾಗೂ ಸಚಿವ ಕೃಷ್ಣ ಬೈರೇಗೌಡ ನಡುವೆ ತೀವ್ರ ವಾಗ್ವಾದ ನಡೆಯಿತು. ಸಾಲ ಮನ್ನಾ ಮಾತನಾಡುವವರು, ಇದಕ್ಕೂ ಮುನ್ನ ಸಾಲಕೊಟ್ಟಿದ್ದು ಯಾರು?ಎನ್ನುವುದನ್ನು ಹೇಳಿ ಅಂದರು. ಕೃಷ್ಣ ಬೈರೇಗೌಡರು ಬಡವರ ಬಗ್ಗೆ ಇಷ್ಟು ಅಸಡ್ಡೆ ಬೇಡ. ಸಂಸತ್ ನಲ್ಲಿ ಶ್ರೀಮಂತರ ಸಾಲ ಮನ್ನಾ ವಿಚಾರ ಬಂದಾಗ ಮಾತನಾಡುವವರೇ ಇಲ್ಲ ಎಂದರು.