ಬೆಂಗಳೂರು: "ತಹಶೀಲ್ದಾರ್ ನ್ಯಾಯಾಲಯದಲ್ಲಿರುವ ತಕರಾರು ಅರ್ಜಿಗಳನ್ನು ಜನವರಿ ಒಳಗಾಗಿ ಸಂಪೂರ್ಣವಾಗಿ ನ್ಯಾಯಯುತ ವಿಲೇವಾರಿ ಮಾಡಬೇಕು. ಅಧಿಕಾರಿಗಳು ಈ ಸೂಚನೆಯನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಕಂದಾಯ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಹಲವು ಸೂಚನೆಗಳನ್ನು ನೀಡಿದ್ದಾಗ್ಯೂ ಉತ್ತಮ ನಿರ್ವಹಣೆ ತೋರದ ತಹಶೀಲ್ದಾರ್ಗಳಿಗೆ ಎಚ್ಚರಿಕೆ ನೀಡಿದ ಸಚಿವರು, "ಜನಸಾಮಾನ್ಯರು ಅವರ ದೈನಂದಿನ ಕೆಲಸ ಬಿಟ್ಟು ದಿನಂಪ್ರತಿ ನಿಮ್ಮ ಕಚೇರಿಗಳಿಗೆ ಅಲೆಯುತ್ತಿರಬೇಕಾ?" ಎಂದು ಪ್ರಶ್ನಿಸಿದರು.
"ಯಾವುದೇ ಪ್ರಕರಣ 90 ದಿನಗಳಲ್ಲಿ ಇತ್ಯರ್ಥಗೊಳ್ಳಬೇಕು ಎಂದು ಕಾನೂನು ಇದ್ದರೂ, ಐದು ವರ್ಷದಷ್ಟು ಹಳೆಯ ಪ್ರಕರಣಗಳೂ ಸಹ ಈವರೆಗೆ ವಿಲೇವಾರಿ ಆಗಿದೆ ಉಳಿಯಲು ಏನು ಕಾರಣ?” ಎಂದು ಪ್ರಶ್ನಿಸಿದರು. "ಜನವರಿಯ ಒಳಗೆ 90 ದಿನಕ್ಕೂ ಹಳೆಯ ಯಾವ ಪ್ರಕರಣಗಳೂ ಉಳಿಯಬಾರದು. ಒಂದು ವೇಳೆ ಅಧಿಕಾರಿಗಳು ಈ ಸೂಚನೆಯನ್ನು ಮೀರಿದಲ್ಲಿ ನೋಟಿಸ್ ಜಾರಿಗೊಳಿಸಲಾಗುವುದು ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಸಿದರು.
ಕಳೆದ ನಾಲ್ಕು ತಿಂಗಳಲ್ಲಿ 30 ಸಾವಿರ ಪ್ರಕರಣ ವಿಲೇವಾರಿ: ಸಭೆಯಲ್ಲಿ ಸಮರ್ಥ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, “ನಮ್ಮ ಸರ್ಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೇ ಒಟ್ಟು 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲೇ ಈ ಪ್ರಕರಣಗಳ ಸಂಖ್ಯೆಯನ್ನು 30 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನೂ ಇತ್ಯರ್ಥಗೊಳಿಸಿ ಶೇ.100 ರಷ್ಟು ಸಾಧನೆ ಮಾಡಬೇಕಿದೆ ಎಂದು ಕಾಲಮಿತಿ" ನೀಡಿದರು.
ಪಾರದರ್ಶಕ ಬರ ಪರಿಹಾರಕ್ಕೆ ಒತ್ತು: "ಬರ ಪರಿಹಾರದ ಹಣವನ್ನು ಸರಿಯಾದ ಸಮಯಕ್ಕೆ ಪಾರದರ್ಶಕವಾಗಿ ರೈತರಿಗೆ ತಲುಪಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಬರ ಪರಿಹಾರದ ಹಣ ನೀಡಲು ರಾಜ್ಯದ ಶೇ.95ರಷ್ಟು ರೈತರ ಹೆಸರಲ್ಲಿ ಐಡಿ ಸೃಷ್ಟಿಸಲಾಗಿದೆ. ಆದರೆ, ಅವರ ಜಮೀನಿನ ವಿಸ್ತೀರ್ಣದ ಸಂಪೂರ್ಣ ಮಾಹಿತಿಯನ್ನು ನಮೂದಿಸಲಾಗಿಲ್ಲ. ಇದರಿಂದ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ.
ಹೀಗಾಗಿ ಅಧಿಕಾರಿಗಳು ಅಭಿಯಾನ ಕೈಗೊಳ್ಳಬೇಕು, ಎಲ್ಲ ರೈತರ ಭೂಮಿಯ ವಿಸ್ತೀರ್ಣವನ್ನು ಸಂಪೂರ್ಣವಾಗಿ “ಫ್ರೂಟ್ಸ್” (fruits) ತಂತ್ರಾಂಶದಲ್ಲಿ ನಮೂದಿಸಬೇಕು. ಈ ಮೂಲಕ ಎಲ್ಲ ರೈತರಿಗೂ ಪಾರದರ್ಶಕವಾಗಿ ಬರ ಪರಿಹಾರ ಹಣ ತಲುಪಲು ಸಹಕರಿಸಬೇಕು" ಎಂದು ತಿಳಿಸಿದರು.