ಬೆಂಗಳೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀಡುವ ಕೂಲಿ ಹಣವನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ 309 ರೂ.ಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಪ್ರಸ್ತುತ ದಿನವೊಂದಕ್ಕೆ 289 ರೂ. ಕೂಲಿ ರೂಪದಲ್ಲಿ ಹಣ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ಈ ಕೂಲಿ ಹಣವನ್ನು 309 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ ಸಿಂಗ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಈಶ್ವರಪ್ಪ ಹೇಳಿದರು.
16.28 ಕೋಟಿ ಮಾನವ ದಿನ ಸೃಜನೆ: ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 2022-23 ನೇ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯ ಗುರಿ ನಿಗದಿಪಡಿಸಿತ್ತು. ಇದರಿಂದ ರಾಜ್ಯಕ್ಕೆ ನರೇಗಾ ಯೋಜನೆಯಡಿ 7,096 ಕೋಟಿ ಅನುದಾನ ಲಭ್ಯವಾಗಲಿದೆ. ರಾಜ್ಯ ಸರ್ಕಾರ ಕೇಂದ್ರದ ಗುರಿಯನ್ನು ಮೀರಿ 16.28 ಕೋಟಿ ಮಾನವ ದಿನಗಳ ಸೃಜನೆ ಮಾಡುವ ಮೂಲಕ ಸಾಧನೆ ಮಾಡಿದೆ.