ಬೆಂಗಳೂರು: "ಲಾಭ ಆಗುತ್ತದೆ ಅನ್ನೋ ದೃಷ್ಟಿಯಿಂದ ಸಮುದಾಯವಾರು ಡಿಸಿಎಂ ಮಾಡಬೇಕು ಅಂತ ಹೈಕಮಾಂಡ್ಗೆ ಸಲಹೆ ಕೊಟ್ಟಿದ್ದೇವೆ" ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಬೆಂಗಳೂರಲ್ಲಿ ಇಂದು ಮಾತನಾಡಿದ ಅವರು, ಸಮುದಾಯವಾರು ಡಿಸಿಎಂ ರಚನೆಯಿಂದ ಲೋಕಸಭೆ ಚುನಾವಣೆಗೆ ಅನುಕೂಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, "ಸಮುದಾಯವಾರು ಡಿಸಿಎಂ ಮಾಡುವ ತೀರ್ಮಾನ ಹೈಕಮಾಂಡ್ಗೆ ಬಿಟ್ಟಿದ್ದು. ಅವರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಒಪ್ಪಿಗೆ ಇದೆ. ಹೈಕಮಾಂಡ್ಗೆ ನಮ್ಮ ಅಭಿಪ್ರಾಯ ಹೇಳಲು ನಾವು ಬದ್ಧರಾಗಿದ್ದೇವೆ" ಎಂದರು.
"ಹೈಕಮಾಂಡ್ ನಾಯಕರ ಭೇಟಿ ಮಾಡಬೇಕು ಎಂಬ ಅಭಿಪ್ರಾಯ ಮೂಡಿದೆ. ಇದರಿಂದ ಪಕ್ಷಕ್ಕೆ ಲಾಭ ಆಗುತ್ತದೆ ಎಂಬ ದೃಷ್ಟಿಯಿಂದ ಸಲಹೆ ಅಭಿಪ್ರಾಯ ನೀಡಿದ್ದೇವೆ. ಒಟ್ಟಿಗೆ ಎಲ್ಲರೂ ಹೋಗೋಣ ಅಂತ ಚರ್ಚೆ ಮಾಡಿದ್ದೇವೆ. ಯಾವಾಗ ಹೋಗೋದು ಎಂಬುದು ತೀರ್ಮಾನ ಆಗಿಲ್ಲ. ಸುರ್ಜೇವಾಲ ಅಮೆರಿಕದಲ್ಲಿ ಇದ್ದಾರೆ. ಅವರು ಬಂದ ಮೇಲೆ ಅವರ ಅಪಾಯಿಂಟ್ಮೆಂಟ್ ತೆಗೆದುಕೊಂಡು ಹೋಗಬೇಕು ಅಂತ ಅಭಿಪ್ರಾಯ ಮೂಡಿದೆ" ಎಂದರು.
"ಎಸ್ಸಿ, ಎಸ್ಟಿ ಸಮುದಾಯ ನಮ್ಮ ಹತ್ತಿರವೇ ಉಳಿಸಿಕೊಳ್ಳಬೇಕು ಎಂದು ಹೈಕಮಾಂಡ್ಗೆ ಮನವರಿಕೆ ಮಾಡುತ್ತೇವೆ. ಸಮುದಾಯಗಳ ವಿಶ್ವಾಸ ಉಳಿಸಿಕೊಳ್ಳಬೇಕು. ಎರಡು ಅಥವಾ ಮೂವರನ್ನು ಡಿಸಿಎಂ ಮಾಡಬೇಕಾ ಎಂಬ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ಉತ್ತರದಲ್ಲಿ ಚುನಾವಣೆ ನಡೆದಾಗ ಬಿಜೆಪಿ ಬೇರೆ ಬೇರೆ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿದೆ. ಒಂದೇ ಡಿಸಿಎಂ ಇರಬೇಕು ಎಂಬುದು ಡಿಕೆಶಿ ಅಭಿಪ್ರಾಯ ಇರಬಹುದು. ಆದರೆ ಎಲ್ಲರ ಅಭಿಪ್ರಾಯ ಪಡೆದುಕೊಂಡಾಗ ಮಾಡಬೇಕಾಗುತ್ತದೆ" ಎಂದು ಹೇಳಿದರು.