ಬೆಂಗಳೂರು : ನ್ಯಾಯಾಲಯಗಳು ಕಾನೂನಿಗಳಿಗೆ ಸಂಬಂಧಿಸಿದಂತೆ ತಡೆ ನೀಡಬಹುದು, ವ್ಯಾಖ್ಯಾನ ಮಾಡಬಹುದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ, ಇತ್ತೀಚಿಗೆ ನ್ಯಾಯಾಲಯಗಳೇ ಕಾನೂನು ಮಾಡಲು ಪ್ರಾರಂಭಿಸಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ವಿಕಾಸ ಸೌಧದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಪೀಠದಲ್ಲಿರುವವರು ನಾನು ಹೇಳಿದ್ದು ಆಗಿಬಿಡಬೇಕು ಎಂಬ ಭಾವನೆ ಹೊಂದಿರುತ್ತಾರೆ. ಅವರು ಹೇಳಿದಂತೆ ಮಾಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದರು.
ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಶಾಸನ ರಚನೆ ಮಾಡುವ ಪ್ರಕ್ರಿಯೆಯೂ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳು ಕಾನೂನು ರಚನೆ ಮಾಡುವ ವಿಧಾನ, ಅವುಗಳಲ್ಲಿನ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು. ಕಾನೂನು ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಶೀಲರಾಗಿರಬೇಕು. ಆಗ ಮಾತ್ರ ಸಮಾಜದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಶಾಸನಸಭೆಗಳಲ್ಲಿ ನಡಾವಳಿಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ಹಕ್ಕುಚ್ಯುತಿ, ನಿಲುವಳಿ ಸೂಚನೆ ಇವುಗಳ ಬಗ್ಗೆಯೂ ಮಾಹಿತಿ ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಜನಾದೇಶದ ಆಧಾರದಲ್ಲಿ ಆಡಳಿತ ನಡೆಯುತ್ತದೆ. ಶಾಸನ ಸಭೆಯು ರಾಜ್ಯದ 6.50 ಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಅವರ ಕಲ್ಯಾಣಕ್ಕೆ ಅಗತ್ಯವಿರುವ ಕಾನೂನುಗಳನ್ನು ರೂಪಿಸುವ ಅಧಿಕಾರ ಇರುವುದು ಶಾಸನ ಸಭೆಗಳಿಗೆ ಮಾತ್ರ. ಬೇರೆ ಯಾರಿಗೂ ಕಾನೂನುಗಳನ್ನು ರಚಿಸುವ ಅಧಿಕಾರ ಇಲ್ಲ. ಮಾನವೀಯತೆಗಿಂತ ಮಿಗಲಾದ ಯಾವುದೇ ಕಾನೂನಿಲ್ಲ. ನಾವು ಮೌಲ್ಯಾಧಾರಿತ ಬದುಕನ್ನು ನಡೆಸಬೇಕು. ಆಡಳಿತದ ಚುಕ್ಕಾಣಿ ಹಿಡಿದವರು ಸರ್ಕಾರದ ನಿಲುವು, ಮಾಧ್ಯಮದ ಮಾಹಿತಿ ಹಾಗೂ ಜನ, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಗಮನ ಹರುಸುವುದು ವಾಡಿಕೆ. ಕಾನೂನು ಮಾಡಿ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟದ ಕೆಲಸ. ಇತ್ತೀಚೆಗೆ ಕೆಲ ರಾಜಕಾರಣಿಗಳು ಪ್ರಚಾರಕ್ಕಷ್ಟೇ ಸೀಮಿತವಾಗಿ ಕೆಲಸ ನಿರ್ವಹಿಸುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾವು ಬೇರೆ ದೇಶದ ಕಾನೂನನ್ನು ಸಹ ತಿಳಿದು ನಮ್ಮ ದೇಶದ ಕಾನೂನನ್ನು ಅವರಿಗೆ ವಿನಿಮಯ ಮಾಡಿಕೊಡಬೇಕು ಎಂದರು.
ಕಾನೂನು ವಿದ್ಯಾರ್ಥಿಗಳು ಅಗಾಧ ಓದಿನ ಜೊತೆಯಲ್ಲಿ ವಿಷಯ ಮನನ ಮಾಡಿಕೊಳ್ಳಬೇಕು. ಯಾವುದೇ ಕೆಲಸ ಮಾಡಿದರೂ ಬದ್ಧತೆ ಇರಬೇಕು. ನಮ್ಮ ನಾಡು, ಜನ, ಸಂಸ್ಕೃತಿಯ ಬಗೆಗೆ ಅರಿವು ಇರಬೇಕು. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೆಸರು ಮಾಡಬೇಕೆಂದು ತಿಳಿಸಿದರು. ಮದ್ಯದಂಗಡಿ ಹಾಗೂ ಅಬಕಾರಿಯಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡುವುದರಲ್ಲಿ ತಪ್ಪಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ನಿನ್ನೆ ನನ್ನ ಮುಂದೆ ಅಧಿಕಾರಿಗಳು ಒಂದು ಬಿಲ್ ತಂದರು. ಮದ್ಯದಂಗಡಿಯಲ್ಲಿ ರಾತ್ರಿ ವೇಳೆ ಮಹಿಳೆಯರು ಕೆಲಸ ಮಾಡಲು ಅವಕಾಶ ಕೊಡುವ ಕಾನೂನು ರೂಪಿಸಿದರೆ, ಕೆಲಸದ ಜಾಗದಲ್ಲಿ ಅವರ ಘನತೆಯನ್ನು ಹೇಗೆ ಕಾಪಾಡುತ್ತೀರಾ ಎಂದು ವಿಶ್ಲೇಷಣೆ ಮಾಡಿ ಎಂದರೆ ಅಧಿಕಾರಿಗಳ ಬಗ್ಗೆ ಉತ್ತರವೇ ಇಲ್ಲ ಎಂದು ಸಚಿವರು ಹೇಳಿದರು.
ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ಇನ್ನಿತರ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿಯಮಗಳನ್ನು ರೂಪಿಸಿದ್ದೇವೆ. ಕಾನೂನು ರಚಿಸಿದ ಕೂಡಲೇ ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಕೆಲವೊಮ್ಮೆ ಕಷ್ಟಕರ. ಕಾನೂನು ರಚನೆ ಮಾಡುವಾಗ ಅದರ ಪರಿಣಾಮ, ದುಷ್ಪರಿಣಾಮಗಳ ಬಗ್ಗೆಯೂ ನಮಗೆ ಜ್ಞಾನ ಇರಬೇಕು ಎಂದರು. ಕಾಲ ಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ಕಾಯ್ದೆ ತಿದ್ದುಪಡಿಯಾಗಬೇಕು. ಎಷ್ಟೋ ಕಾನೂನುಗಳನ್ನು ಅನುಷ್ಠಾನ ಮಾಡಲು ಆಗುತ್ತಿಲ್ಲ ಎಂದರು.