ಬೆಂಗಳೂರು: ಕನಕ ಗುರುಪೀಠದ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹಾಲುಮತ ಸಮುದಾಯದ ಬೇಡಿಕೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿರಸ್ಕರಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಬಿಎಸ್ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಳಿಯಾರು ಪಟ್ಟಣದಲ್ಲಿನ ವೃತ್ತಕ್ಕೆ ಕನಕ ವೃತ್ತ ಎಂದು ಹೆಸರು ಇಡಲು ನನ್ನ ತಕರಾರಿಲ್ಲ. 2006ರಲ್ಲಿ ಗ್ರಾಮ ಪಂಚಾಯತಿಯಿಂದ ಅನುಮೋದನೆ ಸಿಕ್ಕಿತ್ತು ಎಂದು ನನಗೆ ಗೊತ್ತಿರಲಿಲ್ಲ. ಹಾಗಾಗಿ ವೃತ್ತ ನಿರ್ಮಾಣ ನಿಲ್ಲಿಸಲು ಹೇಳಿದ್ದೆ. ಆದರೆ ಈಗ ಪಟ್ಟಣ ಪಂಚಾಯತ್ ಬರಲಿದೆ. ಅಲ್ಲಿ ಮತ್ತೊಮ್ಮೆ ಅನುಮೋದನೆ ಪಡೆದುಕೊಂಡು ಕನಕ ಹೆಸರು ನಾಮಕರಣ ಮಾಡಿ. ನನ್ನದೂ ಸಹಕಾರ ಇದೆ. ಅದಕ್ಕೆ ನನ್ನದೇನೂ ತಕರಾರಿಲ್ಲ ಎಂದರು.
ಈಶ್ವರಾನಂದಪುರಿ ಸ್ವಾಮೀಜಿ ಅವರ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೂ ಉದ್ಭವವಾಗಲ್ಲ. ಅದಕ್ಕಿಂತ ಹೆಚ್ಚು ಏನೂ ಹೇಳಲ್ಲ. ಯಾವ ಸ್ವಾಮೀಜಿಗೂ ಅಪಚಾರ ಮಾಡಲ್ಲ. ಏಕವಚನ ಬಳಸಲ್ಲ. ಸಿದ್ದಗಂಗಾ ಸ್ವಾಮೀಜಿ ಸಂಸ್ಕಾರದಲ್ಲಿ ಬೆಳೆದು ಬಂದಿದ್ದೇವೆ. ಖಾವಿ ಹಾಕಿರುವ ಎಲ್ಲರಿಗೂ ಸಿದ್ದಗಂಗಾ ಶ್ರೀಗಳಿಗೆ ಕೊಡುವಷ್ಟೇ ಗೌರವ ಕೊಡುತ್ತೇವೆ ಎಂದು ಕ್ಷಮೆ ಕೇಳುವ ಬೇಡಿಕೆಯನ್ನು ತಿರಸ್ಕರಿಸಿದರು.