ಬೆಂಗಳೂರು : ಬಕ್ರೀದ್ ಹಬ್ಬದಂದು ಬಿರಿಯಾನಿ ಮಾಡುವುದು ವಿಶೇಷ. ಇದೇ ಬಿರಿಯಾನಿ ಇಂದು ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಸ್ವಾರಸ್ಯಕರ ಘಟನೆಗೆ ಕಾರಣವಾಯಿತು. ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಆಟೋದಲ್ಲಿ ಕಳುಹಿಸಿದ್ದ ಬಿರಿಯಾನಿಯನ್ನು ವಾಪಸ್ ಕಳಿಸಿದ ಪ್ರಸಂಗ ನಡೆಯಿತು.
ರಾಜಧಾನಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಕ್ರೀದ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಬಳಿಕ ಸಂಜೆಯವರೆಗೂ ಯಾವುದೇ ಕಾರ್ಯಕ್ರಮವಿಲ್ಲದ ಕಾರಣ ಶಿವಾನಂದ ವೃತ್ತದ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವ ಸಚಿವ ಜಮೀರ್ ಅಹಮದ್ ಖಾನ್ ಅವರು ಒಂದಿಷ್ಟು ವಿಶೇಷ ಬಿರಿಯಾನಿಯನ್ನು ಪ್ಯಾಕ್ ಮಾಡಿಸಿ ಸಿದ್ದರಾಮಯ್ಯ ನಿವಾಸಕ್ಕೂ ಕಳುಹಿಸಿಕೊಟ್ಟಿದ್ದರು. ಜಮೀರ್ ಕಳುಹಿಸಿದ್ದ ಬಿರಿಯಾನಿ ಪಾರ್ಸಲನ್ನು ಆಟೋದಲ್ಲಿ ಹಾಕಿಕೊಂಡು ಸಿದ್ದರಾಮಯ್ಯ ನಿವಾಸಕ್ಕೆ ತರಲಾಗಿತ್ತು. ಪ್ಲಾಸ್ಟಿಕ್ ಮೂಟೆಗಳಲ್ಲಿ ಪ್ಯಾಕ್ ಮಾಡಿ ತಂದಿದ್ದ ಬಿರಿಯಾನಿ ಡಬ್ಬಗಳನ್ನು ಆಟೋದಲ್ಲಿ ವ್ಯವಸ್ಥಿತವಾಗಿ ಸಿಎಂ ಮನೆಗೆ ಕಳುಹಿಸಲಾಗಿತ್ತು. ಸಿಎಂ ನಿವಾಸಕ್ಕೆ ಆಟೊ ಆಗಮಿಸಿದಾಗ ಪೊಲೀಸರು ಆಟೋ ತಡೆದು ಒಳಹೋಗಲು ಅವಕಾಶ ನೀಡಲಿಲ್ಲ. ಶಿಷ್ಟಾಚಾರದ ಪ್ರಕಾರ ಆಟೋವನ್ನು ಒಳಬಿಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ ಪೊಲೀಸರು ಬಿರಿಯಾನಿ ಸಮೇತ ಆಟೋವನ್ನು ವಾಪಸ್ ಕಳುಹಿಸಿದರು. ಸಿಎಂ ಮನೆಯೊಳಗೆ ತೆರಳಬೇಕಿದ್ದ ಬಿರಿಯಾನಿ ಚಾಮರಾಜಪೇಟೆಗೆ ಹಿಂದಿರುಗಿತು.
ಆದರೆ ಸಿದ್ದರಾಮಯ್ಯ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ಗೆ ಹೇಗಾದರೂ ಸಿಎಂ ನಿವಾಸಕ್ಕೆ ಬಿರಿಯಾನಿ ಕಳುಹಿಸಿ ಕೊಡಲೇಬೇಕಿತ್ತು. ಹಬ್ಬದ ನಿಜವಾದ ಆಚರಣೆ ಯಶಸ್ವಿಯಾಗಬೇಕಾದರೆ ಸಿದ್ದರಾಮಯ್ಯನವರು ತಮ್ಮ ಕಡೆಯಿಂದ ಕಳುಹಿಸಿಕೊಟ್ಟ ಬಿರಿಯಾನಿಯನ್ನು ಸೇವಿಸಬೇಕು. ಸಿದ್ದರಾಮಯ್ಯ ಮಾಂಸಾಹಾರ ಪ್ರಿಯರಾಗಿದ್ದು ಅವರಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ಬಿರಿಯಾನಿ ವ್ಯರ್ಥವಾಗಬಾರದು ಎಂದು ಚಿಂತಿಸಿ ಇದಕ್ಕೊಂದು ಮಾರ್ಗ ಕಂಡುಕೊಂಡಿದ್ದಾರೆ.