ಬೆಂಗಳೂರು:ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹೆಲ್ಪ್ ಲೈನ್ ನಿರ್ವಹಿಸುವ ಒಬ್ಬ ಸಿಬ್ಬಂದಿಯ ವೇತನ ಕೇಳಿ ಸಚಿವ ಜಮೀರ್ ಬೆಸ್ತು ಬಿದ್ದಿದ್ದಾರೆ. 4 ಲಕ್ಷ ರೂಪಾಯಿ ವೇತನ ಪಾವತಿ ಮಾಡುತ್ತಿರುವ ಬಗ್ಗೆ ಪರಮಾಶ್ಚರ್ಯ ವ್ಯಕ್ತಪಡಿಸಿರುವ ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆಯನ್ನ ಸಚಿವ ಜಮೀರ್ ಅಹ್ಮದ್ ನಡೆಸಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ರಚಿಸಲಾದ ಸಹಾಯವಾಣಿ ನಿರ್ವಹಿಸುವ ಸಿಬ್ಬಂದಿಗೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ವೇತನ ಪಾವತಿ ಮಾಡುತ್ತಿರುವುದನ್ನು ಗಮನಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಬ್ಬ ಸಿಬ್ಬಂದಿಗೆ ನಾಲ್ಕು ಲಕ್ಷ ರೂಪಾಯಿ ವೇತನ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಇಲಾಖೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿರುವ ಸಚಿವ ಜಮೀರ್ ಅಹ್ಮದ್, ಇದು ಮುಖ್ಯ ಕಾರ್ಯದರ್ಶಿಗಳ ವೇತನಕ್ಕಿಂತಲೂ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಹೆಲ್ಪ್ ಲೈನ್ನ ನಿರ್ವಹಣೆ ಮಾಡುವ ಸಿಬ್ಬಂದಿಗೆ ನಾಲ್ಕು ಲಕ್ಷ ರೂಪಾಯಿ ವೇತನ ಪಾವತಿ ಮಾಡುತ್ತಿರುವ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಆದೇಶವನ್ನು ನೀಡಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಈಗಾಗಲೇ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಮತ್ತೊಂದು ಹೆಲ್ಪ್ ಲೈನ್ ಆರಂಭಿಸಿ ಅದರಲ್ಲಿರುವ ನಿರ್ವಹಣಾ ಸಿಬ್ಬಂದಿಗೆ ವಾರ್ಷಿಕ 2.5 ಕೋಟಿ ಖರ್ಚು ಮಾಡುವ ಅವಶ್ಯಕತೆ ಇತ್ತಾ? ಎಂದು ಸಚಿವ ಜಮೀರ್ ಅಹ್ಮದ್ ಪ್ರಶ್ನೆ ಮಾಡಿದ್ದಾರೆ.
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ ಕೈಗೊಂಡಿರುವ ಗುತ್ತಿಗೆ ಕಾಮಗಾರಿಗಳ ಪಾವತಿ ಬಗ್ಗೆ ವಿವರ ಪಡೆದು ತಮಗೆ ಮಾಹಿತಿ ಒದಗಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಇದೇ ವೇಳೆ ಸೂಚಿಸಿದ್ದಾರೆ. ರಾಜ್ಯದಲ್ಲಿ 29 ಅಲ್ಪಸಂಖ್ಯಾತ ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಂದು ವರ್ಷದಲ್ಲಿ ಎಲ್ಲ ಶಾಲೆಗಳು ಸ್ವಂತ ಕಟ್ಟಡವನ್ನು ಹೊಂದುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿದ್ಯಾಸಿರಿ ಯೋಜನೆ ಅಡಿ ಹಾಸ್ಟೆಲ್ ಸೌಲಭ್ಯ ದೊರೆಯದ 18,800 ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 27 ಕೋಟಿ ಹಣ ಪಾವತಿಸಲಾಗುತ್ತಿದೆ. ಈ ವೆಚ್ಚ ಕಡಿತಗೊಳಿಸಲು ಸ್ವಂತ ಹಾಸ್ಟೆಲ್ ನಿರ್ಮಾಣಕ್ಕೆ ಜಮೀನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಅಪೂರ್ಣಗೊಂಡಿರುವ 126 ಶಾದಿ ಮಹಲ್ಗಳ ಕಾಮಗಾರಿ ಪೂರ್ಣಗೊಳಿಸಲು 56 ಕೋಟಿ ರೂಪಾಯಿಗಳ ಅಗತ್ಯತೆ ಇದೆ ಎಂದು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಶಾದಿ ಮಹಲ್ಗಳು, ಸಮುದಾಯ ಭವನ ನಿರ್ಮಾಣ ಹಾಗೂ ಸಮುದಾಯ ಭವನದ ನವೀಕರಣ ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ಅವ್ಯವಹಾರ ಕಂಡು ಬಂದರೆ, ದುರುಪಯೋಗ ಆಗಿರುವುದು ಗಮನಕ್ಕೆ ಬಂದರೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾಲಮಿತಿಯಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಗಡುವು