ಬೆಂಗಳೂರು: ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ಪ್ರತ್ಯೇಕ ಸ್ಲಾಬ್ ಅನ್ನ ಘೋಷಿಸುವ ಬಗ್ಗೆ ಶೀಘ್ರದಲ್ಲೇ ಕೈಗಾರಿಕಾ, ನಗರಾಭಿವೃದ್ದಿ ಹಾಗೂ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಎಫ್‌ಕೆಸಿಸಿಐನಲ್ಲಿ ನಗರಾಭಿವೃದ್ದಿ ಸಚಿವರು ಹಾಗೂ ಕೈಗಾರಿಕಾ ಸಚಿವರೊಂದಿಗೆ ಆಸ್ತಿ ತೆರಿಗೆ ಪರಿಷ್ಕರಣೆಯ ಕುರಿತಂತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಸ್ತಿ ತೆರಿಗೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೈಗಾರಿಕೋದ್ಯಮಿಗಳು ಸಾಕಷ್ಟು ಬಾರಿ ಮನವಿಯನ್ನು ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ನಗರಾಭಿವೃದ್ದಿ ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಲಾಗಿದೆ ಎಂದರು.
ಅಲ್ಲದೆ, ಈ ಬಾರಿಯ ಆಯವ್ಯಯದಲ್ಲಿ ಹಾಗೂ ನೂತನ ಕೈಗಾರಿಕಾ ನೀತಿಯಲ್ಲೂ ಪ್ರಸ್ತಾಪಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ನೂತನ ಸ್ಲಾಬನ್ನು ರಚಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ವಿಷಯವಾಗಿ ಸಚಿವ ಸಂಪುಟದ ಮುಂದೆ ನಗರಾಭಿವೃದ್ದಿ ಇಲಾಖೆಯ ವತಿಯಿಂದ ಶೀಘ್ರದಲ್ಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಹಳೆಯ ತೆರಿಗೆಯ ಬಗ್ಗೆ:ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಹಾಗೂ ಕೆಎಸ್‌ಎಸ್‌ಐಡಿಸಿ ವತಿಯಿಂದ ಅಭಿವೃದ್ದಿಪಡಿಸಲಾದ ಕೈಗಾರಿಕಾ ಪ್ರದೇಶಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಮುನ್ನ ತೆರಿಗೆ ಸಂಗ್ರಹ ಮಾಡುವ ಹಾಗಿಲ್ಲ. ಆದರೆ, ಕೆಲವು ಕಡೆ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸುತ್ತಿವೆ. ಆದರೆ ತೆರಿಗೆ ನೀಡುವ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಂದ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಆಗದೇ ಇರುವ ಹಿನ್ನಲೆಯಲ್ಲಿ ಹಲವಾರು ದೂರುಗಳನ್ನು ನೀಡುತ್ತಿದ್ದಾರೆ.