ಬೆಂಗಳೂರು :ಅರಣ್ಯ ಮತ್ತು ಮೃಗಪಕ್ಷಿಗಳು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ, ಧರ್ಮದ ಭಾಗವಾಗಿದೆ. ಈ ಬ್ರಹ್ಮಾಂಡದಲ್ಲಿ ಎಲ್ಲ ಜೀವಿಗಳಿಗೂ ಬದುಕುವ ಸಮಾನ ಅವಕಾಶವಿದೆ, ಹಕ್ಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಅರಣ್ಯ ಇಲಾಖೆಯ ಲಾಂಛನ (ಲೋಗೋ) ಬಿಡುಗಡೆ ಮಾಡಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಹೊಸ ಸರ್ಕಾರ ಬಂದಿದೆ. ರಾಜ್ಯದೆಲ್ಲೆಡೆ ಹೊಸ ಹುರುಪು ಮೂಡಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೂ ಹೊಸ ಹುರುಪು ನೀಡಲು ಲಾಂಛನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಅರಣ್ಯ ಸಚಿವಾಲಯ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ. ಆದರೆ ಈ ಇಲಾಖೆಗೆ ತನ್ನದೇ ಆದ ಸ್ವಂತ ಲಾಂಛನ ಇರಲಿಲ್ಲ. ಈಗ ಆ ಕಾಲ ಕೂಡಿ ಬಂದಿದೆ. ಇಲಾಖೆಯ ಉದ್ದೇಶ, ಮೌಲ್ಯಗಳು ಮತ್ತು ಕಾರ್ಯವನ್ನು ಪ್ರತಿನಿಧಿಸುವ ರೀತಿಯಲ್ಲಿ ಲಾಂಛನವನ್ನು ರೂಪಿಸಲಾಗಿದೆ ಎಂದರು. ಇಲಾಖೆಯ ಲಾಂಛನವು ಸಮಾಜದಲ್ಲಿ ವಿಶಿಷ್ಟ ಅಸ್ಮಿತೆ ಸ್ಥಾಪಿಸುತ್ತದೆ. ಜನರಲ್ಲಿ ಅರಣ್ಯ ಇಲಾಖೆಯ ಬಗ್ಗೆ ಹೆಮ್ಮೆ ಮೂಡಿಸಲು ನೆರವಾಗುತ್ತದೆ. ಇನ್ನು ಮುಂದೆ ಇಲಾಖೆಯ ಅಧಿಕೃತ ವೆಬ್ಸೈಟ್, ಸಾಮಾಜಿಕ ಮಾಧ್ಯಮ ತಾಣಗಳು, ಮತ್ತು ಪ್ರಚಾರ ಸಾಮಗ್ರಿಗಳಲ್ಲಿಈ ಲೋಗೋ ಬಳಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯ, ಉದ್ದೇಶವನ್ನು ಬಿಂಬಿಸುವಂತಹ ತನ್ನದೇ ಆದ ಲಾಂಛನ ಅಳವಡಿಸಿಕೊಳ್ಳಲು ನಿರ್ಧರಿಸಿ ಕಳೆದ ವರ್ಷ ವಿದ್ಯಾರ್ಥಿಗಳನ್ನು, ಕಲಾವಿದರು ಮತ್ತು ಸಾರ್ವಜನಿಕರಿಂದ ಲಾಂಛನ ರಚಿಸುವಂತೆ ಕೋರಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಒಟ್ಟು 309 ಲೋಗೋ ವಿನ್ಯಾಸಗಳು ಬಂದಿದ್ದವು. ಈ ಎಲ್ಲವನ್ನೂ ಪರಿಶೀಲಿಸಲು, ಒಂದು ಸಮಿತಿಯನ್ನು ರಚಿಸಿ, 3 ಹಂತಗಳಲ್ಲಿ ಸ್ಪರ್ಧೆಯನ್ನು ನಡೆಸಿ, ಅಂತಿಮವಾಗಿ ಈ ಲೋಗೋ ಆಯ್ಕೆ ಮಾಡಲಾಗಿದೆ ಎಂದರು.