ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ 250 ಬೆಡ್ಗಳಿರುವ ಕೋವಿಡ್ ಕೇರ್ ಸೆಂಟರ್ಅನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.
ಮಹಾಲಕ್ಷ್ಮಿ ಲೇಔಟ್ನಲ್ಲಿ 250 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಸಚಿವದ್ವಯರು - ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಸಚಿವರು
ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್ನ ಪ್ರಿಸ್ಟೀನ್ ಆಸ್ಪತ್ರೆಯಲ್ಲಿ 250 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಗರದ ಪ್ರಿಸ್ಟೀನ್ ಆಸ್ಪತ್ರೆಯಲ್ಲಿ 250 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಸಚಿವರು ಇಂದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಚಿವ ಗೋಪಾಲಯ್ಯ, ಕೆಲವು ದಿನಗಳಿಂದ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಪಾಸಿಟಿವ್ ಕೇಸ್ಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರದ ಮತದಾರರು ಯಾರೂ ಬೆಡ್ ಇಲ್ಲದೆ ಪರದಾಡಬಾರದು. ನುರಿತ ವೈದ್ಯರ ತಂಡವು ಸಿದ್ಧವಾಗಿದೆ. ಅಲ್ಲದೆ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ನೀಡುವ ಕೇಂದ್ರವನ್ನು ತೆರೆಯಲಾಗಿದ್ದು, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಹಾಗೂ ನಾನ್ ಪಾಸಿಟಿವ್ ಕೇಸುಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಮತ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಸಚಿವ ಸುರೇಶ ಕುಮಾರ್ ಮಾತನಾಡಿ, ದುರ್ಬಲ ಮನಸ್ಸಿನ ಜನರು ಅಂದ್ರೆ 50 ವರ್ಷ ವಯಸ್ಸಿನವರು, ಗರ್ಭಿಣಿಯರು ಮತ್ತು ಚಿಕ್ಕಮಕ್ಕಳು ಹೊರ ಬಾರದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮನೆಯಲ್ಲಿ ಇರಿ. ಕೊರೊನಾ ಸೋಂಕಿನ ಚೈನ್ ಮುರಿಯುವ ಸಲುವಾಗಿ ಸರ್ಕಾರ ಈ ಮುಂದಿನ 1 ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಯಾರೂ ಭಯ ಬೀಳದೆ ಸರ್ಕಾರಕ್ಕೆ ಸಹಕಾರ ನೀಡಬೇಕು. ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕೆ.ಗೋಪಾಲಯ್ಯ ಅವರು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.