ಬೆಂಗಳೂರು : ರಾಮನಗರ ಜಿಲ್ಲೆಯ ಕನಕಪುರದ ಬಾಲಕಿಯೊಬ್ಬಳು ಭಗ್ನಪ್ರೇಮಿಯಿಂದ ಆ್ಯಸಿಡ್ ದಾಳಿಗೊಳಗಾಗಿದ್ದಳು. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ ಯೋಗಕ್ಷೇಮ ವಿಚಾರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ‍್ಧಿ ಸಚಿವ ಹಾಲಪ್ಪ ಆಚಾರ್ ಅವರು ಧೈರ್ಯ ತುಂಬಿದರು. ದಾಳಿಯಿಂದ ಆಘಾತಕ್ಕೊಳಗಾಗಿರುವ ಬಾಲಕಿ ಹಾಗೂ ಆಕೆಯ ತಾಯಿಗೆ ಧೈರ್ಯ ತುಂಬಿದ ಸಚಿವರು, ಸರ್ಕಾರ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡುತ್ತದೆ. ಆದಷ್ಟು ಬೇಗ ಚೇತರಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಬಾಲಕಿಗೆ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ಕನಕಪುರ ಪಟ್ಟಣದಲ್ಲಿ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ಆಕೆಯ ಬೆನ್ನು, ಭುಜ, ಕಣ್ಣಿಗೆ ಹಾನಿಯಾಗಿದೆ. ಇಂತಹವರ ಮೇಲೆ ಸರ್ಕಾರ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಕನಕಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಈಗಾಗಲೇ ಚರ್ಚಿಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.
ಹುಚ್ಚು ಕ್ರಿಮಿಗಳು ಇಂತಹ ದುಷ್ಕೃತ್ಯ ಎಸಗಿದ್ದು, ಇಂತಹ ಘಟನೆಗಳು ಮರುಕಳಿಸಬಾರದು. ಘಟನೆ ಬಗ್ಗೆ ಇಂದು ಬೆಳಗ್ಗೆ ತಮಗೆ ಮಾಹಿತಿ ತಿಳಿಯುತ್ತಿದ್ದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸರ್ಕಾರದ ಪರವಾಗಿ ಸಾಂತ್ವನ ಹೇಳಿದ್ದೇನೆ. ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕಾರ್ನಿಯಾ ತಜ್ಞರು ಪರಿಶೀಲಿಸಲಿದ್ದಾರೆ. ತಜ್ಞ ವೈದ್ಯರ ಚಿಕಿತ್ಸೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ನೆರವಾಗಲಿದೆ ಎಂದರು.