ಬೆಂಗಳೂರು: ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ಗೆ ಸಂಸತ್ತಿನಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ಗೊತ್ತಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸಿದ್ದವರು ಈಗ ಲಜ್ಜೆಗೆಟ್ಟು ಬಿಜೆಪಿಗೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿದರು. ಕಾರ್ಯಕರ್ತರ ಅಹವಾಲು ಆಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 22 ರಿಂದ ಆಗಸ್ಟ್ 13ರ ವರೆಗೂ ಸಂಸತ್ ಕಲಾಪ ನಡೆಯಿತು. ಕೊರೊನಾ, ದೇಶದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷದವರು ಸಂಸತ್ ಅಧಿವೇಶನ ನಡೆಯಲು ಬಿಡದೆ ಹೊರ ನಡೆದಿದ್ದಾರೆ, ಇದು ಖಂಡನೀಯ ಎಂದರು.
ದೇಶದಲ್ಲೇ ಅತ್ಯಂತ ಹಳೆಯ ಪಕ್ಷಕ್ಕೆ ಸಂಸತ್‌ನಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಕಾಂಗ್ರೆಸ್ ನವರು ಕುಟುಂಬದ ಹಾಗೂ ಮನೆತನದ ಹಿನ್ನೆಲೆ ಉಳ್ಳವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸುತ್ತಿರುವವರು ಅವರು. ಈಗ ಲಜ್ಜೆಗೆಟ್ಟು ಬಿಜೆಪಿಗೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಟೀಕಿಸಿದರು.