ಬೆಂಗಳೂರು: ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಂದರೆ 36 ಇದ್ದಂತೆ. ಎರಡೂ ಮುಖ ಎಂದಿಗೂ ಸೇರುವುದಿಲ್ಲ. ಎಣ್ಣೆ ಮತ್ತು ಸೀಗೇ ಕಾಯಿ ಒಂದಾಗಲು ಸಾಧ್ಯವೇ? ಎಂದೂ ಸಾಧ್ಯವಿಲ್ಲ. ಅವರಿಬ್ಬರೂ ಒಂದಾಗಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಬ್ಬರೂ ಒಂದಾಗಲು ಪ್ರಯತ್ನ ಮಾಡುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರ ದಾರಿ ಬೇರೆ ಬೇರೆ, ಸಿದ್ದರಾಮಯ್ಯ ಅವರದ್ದು ಒಂದು ದಾರಿ, ಡಿಕೆಶಿಯ ಅವರದ್ದು ಒಂದು ದಾರಿ ಇದೆ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದು ಮಾತಿದೆ.
ಅವರಿಬ್ಬರೂ 36 ಎಂದು. 36 ಎಂದೂ ಒಂದಾಗಲ್ಲ, ಮೂರು ಒಂದು ಕಡೆ ಇದ್ದರೆ, ಆರು ಒಂದು ಕಡೆ ಇರುತ್ತದೆ. ಮುಖ ಕೂಡುವುದಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಮೂವತ್ತಾರು. ಇಬ್ಬರ ಸಿದ್ದಾಂತವೂ ಬೇರೆ ಬೇರೆ. ಇಬ್ಬರು ಸಿಎಂ ಅಭ್ಯರ್ಥಿಗಳು ಒಂದೇ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ. ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಿಚಾಯಿಸಿದರು.
ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಮೋಸ:ಮಲ್ಲಿಕಾರ್ಜುನ ಖರ್ಗೆಹಿರಿಯ ನಾಯಕ. 11 ಬಾರಿ ಗೆಲ್ಲುತ್ತಾರೆ. ಅವರನ್ನು ಸಿಎಂ ಮಾಡಬೇಕಾಗಿತ್ತು. ಕಾಂಗ್ರೆಸ್ ಯಾರ್ಯಾರನ್ನೋ ಸಿಎಂ ಮಾಡಿತು. ಆದರೆ, ಖರ್ಗೆಯವರನ್ನು ಮಾಡಲಿಲ್ಲ. ಆ ಮೂಲಕ ಅವರಿಗೆ ಅನ್ಯಾಯ ಮಾಡಿದೆ. ದಲಿತರ ಬಗ್ಗೆ ಕಾಂಗ್ರೆಸ್ಗೆ ನಿಜವಾದ ಕಾಳಜಿ ಇಲ್ಲ. ಖರ್ಗೆ ಎಷ್ಟೇ ಪ್ರಯತ್ನಪಟ್ಟರೂ ಸಹ ಅವರನ್ನು ಸಿಎಂ ಮಾಡಲಿಲ್ಲ. ಅವರ ಹಿರಿತನ, ಅನುಭವ ಹೊಂದಿದ್ದಾರೆ ಎಂದರು.
ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಅವಸಾನದ ಅಂಚಿನಲ್ಲಿದೆ. ಅಂಥ ಸಂದರ್ಭದಲ್ಲಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತಿರುವುದಕ್ಕೆ ನಾನು ಹೇಳಬೇಕು ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ಅವರೊಂದಿಗೆ ಮೋಸದ ಆಟವಾಡಿದೆ. ಈಗಲಾದರೂ ಮುಂದಿನ ಸಿಎಂ ಖರ್ಗೆ ಎಂದು ಘೋಷಣೆ ಮಾಡಲಿ.