ಬೆಂಗಳೂರು:ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ವರ್ಷದ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರುವ ಮೂಲಕ ಮೋದಿಯವರು ತಮ್ಮ ರಾಜಕೀಯ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಸಚಿವ ಕೆ.ಗೋಪಾಲಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿರುವುದು ಭಾರತದ ಅಖಂಡತೆ ಮತ್ತು ಏಕತೆಯನ್ನು ರಕ್ಷಿಸುವ ಹಾದಿಯಲ್ಲಿ ಒಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಮೋದಿಯವರನ್ನು ಹಾಡಿ ಹೊಗಳಿದ್ದಾರೆ.
ಕೊರೊನಾ ವೈರಸ್ ಜಗತ್ತಿನ ಉದ್ದಗಲಕ್ಕೂ ಸ್ಫೋಟಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ದಿಟ್ಟ ನಿರ್ಧಾರಗಳು ಇಡೀ ಜಗತ್ತಿಗೆ ಮಾದರಿಯಾಯಿತು. ಕೊರೊನಾ ಹೆಮ್ಮಾರಿ ಭಾರತವನ್ನು ಪ್ರವೇಶಿಸಿದ ಸಮಯದಿಂದಲೇ ಕೊರೊನಾ ವ್ಯಾಪಿಸದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಪರಿಣಾಮವಾಗಿ ಭಾರತದ ಲಕ್ಷಾಂತರ ಜನರ ಜೀವ ಉಳಿಯಿತು ಎಂದರು.
ದಿಟ್ಟ ನಿರ್ಧಾರಗಳು, ರಾಜಕೀಯ ಇಚ್ಛಾಶಕ್ತಿಯ ಪರಿಣಾಮ ನರೇಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಇಂತಹ ದೂರದೃಷ್ಟಿಯ ಹಾಗೂ ರಾಜಕೀಯ ಇಚ್ಛಾಶಕ್ತಿಯ ಪ್ರಧಾನಿಯನ್ನು ಹೊಂದಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದಿದ್ದಾರೆ.