ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನಿವಾಸಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಿನ್ನೆ(ಗುರುವಾರ) ಸಂಜೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆ ಎಐಸಿಸಿ, ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಸಚಿವರಾದ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮನವೊಲಿಕೆ ಯತ್ನ ನಡೆಸಿದ್ದಾರೆ. 'ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದರೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟಾಗುತ್ತದೆ. ಹೀಗಾಗಿ ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದಾರೆ' ಎನ್ನಲಾಗಿದೆ.
ತಮ್ಮ ಹೇಳಿಕೆ ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಹಾಗಾಗಿ ಬಹಿರಂಗ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ. ಸುಮಾರು ಒಂದು ತಾಸುಗಳ ಕಾಲ ಸಮಾಲೋಚನೆ ನಡೆಸಿದ ಅವರು, ಬಿ.ಕೆ ಹರಿಪ್ರಸಾದ್ ಅವರನ್ನು ಸಮಾಧಾನಪಡಿಸುವ ಯತ್ನ ಮಾಡಿದರು. ಜೊತೆಗೆ ಹರಿಪ್ರಸಾದ್ ಈಡಿಗ, ಬಿಲ್ಲವ ಹಾಗೂ ಅತಿ ಹಿಂದುಳಿದ ವರ್ಗಗಳ ಸಮಾವೇಶವನ್ನು ರಾಜ್ಯದ ಹಲವೆಡೆ ಮಾಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ತರಹದ ಸಮುದಾಯಗಳ ಸಮಾವೇಶದಿಂದ ಪಕ್ಷಕ್ಕೆ ಹಿನ್ನಡೆಯಾಗಲಿದ್ದು, ಲೋಕಸಭೆ ಚುನಾವಣೆ ವೇಳೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಮಾವೇಶ ಮಾಡುವ ಯೋಚನೆಯನ್ನು ಕೈ ಬಿಡುವಂತೆ ಹರಿಪ್ರಸಾದ್ ಮನವೊಲಿಕೆಗೆ ಡಾ.ಜಿ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿ.ಕೆ.ಹರಿಪ್ರಸಾದ್ ಭೇಟಿ ಮಾಡಿದ ಸಚಿವ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ಬಿ ಕೆ ಹರಿಪ್ರಸಾದ್ಗೆ ಶೋಕಾಸ್ ನೊಟೀಸ್
ಭೇಟಿ ಬಳಿಕ ಮಾತನಾಡಿದ ಸಚಿವ ಡಾ.ಜಿ ಪರಮೇಶ್ವರ್, "ಒಬ್ಬರಿಗೊಬ್ಬರು ಭೇಟಿ ಆಗಬಾರದು ಅಂತ ಇದೆಯಾ?. ಅವರು ನಮ್ಮ ಹಿರಿಯ ನಾಯಕರು. ಅನೇಕ ಆಂತರಿಕ ವಿಷಯ ಇರುತ್ತದೆ. ಅದೆಲ್ಲಾ ಮಾಧ್ಯಮಕ್ಕೆ ಹೇಳೊಕೆ ಆಗುತ್ತಾ?. ಅವರಿಗೆ ಅಸಮಾಧಾನ ಇದೆ ಅಂತ ಅವರು ನಿಮಗೆ ಹೇಳಿದ್ರಾ?. ಅವರು ನಗು ನಗುತ್ತಾ ಇಲ್ವ?. ನಮ್ಮ ಪಕ್ಷದ ಮುಖಂಡರಾದ ಸತೀಶ್ ಜಾರಕಿಹೊಳಿ ಜೊತೆ ಭೇಟಿ ಮಾಡಿದ್ದೇವೆ. ಅಸಮಾಧಾನ ಇದೆ ಎಂದು ಹರಿಪ್ರಸಾದ್ ತಮ್ಮ ಭಾಷಣದಲ್ಲಿ ಏನು ಹೇಳಿದ್ರಾ?" ಎಂದು ಪ್ರಶ್ನಿಸಿದರು.
ಹರಿಪ್ರಸಾದ್ ಭೇಟಿ ಉದ್ದೇಶದ ಬಗ್ಗೆ ಮಾತನಾಡಲು ನಿರಾಕರಿಸಿದ ಸತೀಶ್ ಜಾರಕಿಹೊಳಿ, ನಮ್ಮ ಪರವಾಗಿ ಒಬ್ರು ಮಾತಾಡಿದ್ರಲ್ಲಾ ಸಾಕು ಎಂದರು. ಇತ್ತ ಬಿ.ಕೆ.ಹರಿಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು?: ಪಂಚೆ ಹಾಕಿ, ಖಾಕಿ ಚಡ್ಡಿ ಹಾಕಿಕೊಂಡರೆ ಅವರು ಸಮಾಜವಾದಿ ಆಗಲ್ಲ. ದೇವರಾಜ ಅರಸು ಅವರ ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ. ಅರಸು ಅವರ ಚಿಂತನೆಗಳು ಇರಬೇಕು. ನಾನು ಸೋತಿರಬಹುದು, ಆದರೆ ಸತ್ತಿಲ್ಲ. ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ಎಂದು ಇತ್ತೀಚೆಗೆ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಿ.ಕೆ. ಹರಿಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಗೃಹ ಸಚಿವ ಜಿ.ಪರಮೇಶ್ವರ್ ಅವರಂತಹ ದಲಿತ ನಾಯಕರನ್ನು ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪರಿಗಣಿಸದೇ ಇರುವುದು ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರಂತಹ ಎಸ್‌ಟಿ ಮುಖಂಡರನ್ನು ಪರಿಗಣಿಸದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಬಹಿರಂಗ ಹೇಳಿಕೆ ನೀಡದಂತೆ ಬಿ.ಕೆ.ಹರಿಪ್ರಸಾದ್ಗೆ ಕಾಂಗ್ರೆಸ್ ಹೈಕಮಾಂಡ್ ತಾಕೀತು