ಬೆಂಗಳೂರು:ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಇಂದಿನಿಂದ ರಾಜ್ಯದ ಎಲ್ಲ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನ ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ವಿಧಾನಪರಿಷ್ ಕಲಾಪದಲ್ಲಿ ಕೊರೊನಾ ಬಗ್ಗೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಸ್ತಾಪ ಮಾಡಿದರು. ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಗಮನಿಸಿದ್ದೇವೆ ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಬೆಂಗಳೂರಿಗೆ ಬಂದು ಹೋದ ಹೈದರಾಬಾದ್ ಟೆಕ್ಕಿಗೆ ಕೊರೊನಾ ಶಂಕೆ ಪ್ರಕರಣ ನಮ್ಮನ್ನೆಲ್ಲ ಆತಂಕಕ್ಕೆ ಸಿಲುಕಿಸಿದೆ. ಈ ಮಹಾಮಾರಿ ತಡೆಗೆ ಯಾವ ರೀತಿಯಲ್ಲಿ ಸರ್ಕಾರ ಸಜ್ಜಾಗಿದೆ ಎಂದು ಪ್ರಶ್ನಿಸಿದರು.
ನಂತರ ಜೆಡಿಎಸ್ ಸದಸ್ಯ ಶರವಣ ಮಾತನಾಡಿ, ನಾನು ನಿನ್ನೆ ಸರ್ಕಾರದ ಗಮನ ಸೆಳೆಯಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಅದನ್ನು ನೋಡಿ ಅನೇಕರು ನಿಮಗೇನಾದ್ರೂ ಕೊರೊನಾ ಬಂದಿದೆಯಾ ಎಂದು ಹಾಸ್ಯ ಮಾಡಿದ್ರು. ನಿನ್ನೆ ನನಗೆ ಈ ವಿಚಾರ ಮಾತನಾಡಲು ಅವಕಾಶ ಸಿಗಲಿಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲೂ ಕೊರೊನಾ ಬಗ್ಗೆ ನೆಗೆಟಿವ್ ಅಂಶಗಳು ಪ್ರಚಾರ ಆಗ್ತಿವೆ. ಇಂತಹವುಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ. ರಾಜ್ಯದ ಜನರಿಗೆ ಕೊರೊನಾ ಬಗ್ಗೆ ಇರುವ ಭಯ ಹೋಗಿಸಬೇಕು. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಳ್ಳಬೇಕು ಜೊತೆಗೆ ಬಸ್ ಆಟೋಗಳ ಹಿಂದೆ ಜಾಹೀರಾತು ಹಾಕಬೇಕು. ಸಚಿವರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಪರಾಮರ್ಶೆ ಮಾಡಬೇಕು ಎಂದು ಹೇಳಿದರು.