ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಕೃತಿ, ಪರಿಸರ ಉಳಿಸುವ ಬಗ್ಗೆ ಮಾತನಾಡಬೇಕು. ಆದರೆ, ಅವರು ಏಕೆ ನಂದಗೋಡನ ಹಳ್ಳಿಯ ಮರಗಳನ್ನು ಅಕ್ರಮವಾಗಿ ಕಡಿದವರ ಪರವಾಗಿ ಮಾತನಾಡಿದ್ದಾರೋ ನನಗೆ ತಿಳಿಯುತ್ತಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
126 ಮರಗಳ ಅಕ್ರಮ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನಿನ್ನೆ ಮಾಧ್ಯಮಗೋಷ್ಟಿಯಲ್ಲಿ ಮಾಡಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿರುವ ಖಂಡ್ರೆ, ಮಾಜಿ ಮುಖ್ಯಮಂತ್ರಿಯವರಿಗೆ ಮಾಹಿತಿಯ ಕೊರತೆ ಇದೆ ಎನಿಸುತ್ತದೆ. ಮುಖ್ಯಮಂತ್ರಿಗಳೇ ಮರ ಕಡಿಸಿ ವಿಕ್ರಂ ಸಿಂಹ ಅವರ ಜಾಗದಲ್ಲಿ ಹಾಕುವಂತೆ ಹೇಳಿದ್ದಾರೆ ಎಂದು ಆರೋಪಿಸಿರುವುದು ಹಾಸ್ಯಾಸ್ಪದ. ಡಿ.16ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಹಜರ್ ಮಾಡಿದ್ದ ಬೇಲೂರು ತಹಶೀಲ್ದಾರ್ ಅವರು 300ಕ್ಕೂ ಹೆಚ್ಚು ಮರಗಳನ್ನು ಅನುಮತಿ ಇಲ್ಲದೆ ಅಕ್ರಮವಾಗಿ ಕಡಿಯಲಾಗಿದೆ. ಸರ್ಕಾರಿ ಜಾಗದಲ್ಲಿದ್ದ ಮರಗಳನ್ನೂ ಕಡಿದಿದ್ದಾರೆ. ಇದರಲ್ಲಿ ಬೀಟೆ, ಸಾಗುವಾನಿ, ಮಹಾಗನಿ ಮೊದಲಾದ ಲಕ್ಷಾಂತರ ರೂ. ಬೆಲೆಬಾಳುವ ಮರ ಕಡಿಯಲಾಗಿದೆ. 25 ಲೋಡ್ ಮರ ಇದೆ ಎಂದು ಹೇಳಿದ್ದಾರೆ. ಕತ್ತರಿಸಿದ ಮರಗಳ ರಾಶಿ ಇರುವ ವಿಡಿಯೋ ಮತ್ತು ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನೂರಾರು ಮರಗಳನ್ನು ಕಡಿದಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಕುಮಾರಸ್ವಾಮಿ ಅವರು ವಿಕ್ರಂ ಸಿಂಹ ಪರವಾಗಿ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಮರ ಕಡಿತಲೆ ಆದಾಗ ವೃಕ್ಷ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಭೂಮಿಯ ಮಾಲೀಕರ ವಿರುದ್ಧ ನಮ್ಮ ಇಲಾಖೆಯ ಅಧಿಕಾರಿಗಳು ಡಿ.16ರಂದು ಎಫ್ಐಆರ್ ಹಾಕಿದ್ದಾರೆ. 2 ದಿನಗಳ ಬಳಿಕ ಈ ಭೂಮಿಯಲ್ಲಿ ಶುಂಠಿ ಬೆಳೆಯಲು ವಿಕ್ರಂ ಸಿಂಹ ಅವರು ಕರಾರು ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಸಂಸದರ ಸೋದರರೋ ಅಲ್ಲವೋ ಎಂಬುದು ಮುಖ್ಯವಲ್ಲ. ಆ ವಿಷಯ ತಮಗೆ ತಿಳಿದೂ ಇರಲಿಲ್ಲ ಎಂದು ಹೇಳಿದ್ದಾರೆ.
ಭೂ ಮಾಲೀಕರೊಂದಿಗೆ 11.12.2023ರಂದು ಅಗ್ರಿಮೆಂಟ್ ಆಗಿದೆ. ಬಳಿಕ ಆ ಜಮೀನಿನಲ್ಲಿ ಮತ್ತು ಪಕ್ಕದ ಗೋಮಾಳದಲ್ಲಿ ಅಕ್ರಮವಾಗಿ ಮರ ಕಡಿಯಲಾಗಿದೆ. ಯಾವುದೇ ಬಡ ರೈತನಿಗೆ ನೂರಾರು ಮರ ಕಡಿಯುವ ಶಕ್ತಿ, ಧೈರ್ಯ ಇರುವುದಿಲ್ಲ. ಪ್ರಭಾವಿಗಳು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಅಲ್ಲವೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ವಿನಾಕಾರಣ ಪ್ರತಾಪ್ ಸಿಂಹ ಅವರ ಸೋದರನ ಮೇಲೆ ಸರ್ಕಾರ ಆರೋಪ ಮಾಡಿದೆ ಎಂದು ಹೇಳಿದ್ದಾರೆ. ಮೂರೂವರೆ ಎಕರೆ ಜಮೀನಿನ ಅಗ್ರಿಮೆಂಟ್ ಮಾಡಿಕೊಂಡಿರುವವರು ಆ ಕರಾರಿನಲ್ಲಿ ಸದರಿ ಜಮೀನಿನಲ್ಲಿ ಇಷ್ಟು ಮರ ಇದೆ, ಇಂತಿಂತಹ ಜಾತಿ ಮರ ಇದೆ, ಅದಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಏಕೆ ಉಲ್ಲೇಖ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಸ್ವತಃ ರೈತ ಕುಟುಂಬದಿಂದ ಬಂದ ಕುಮಾರಸ್ವಾಮಿ ಅವರನ್ನೇ ಕೇಳುತ್ತೇನೆ. ಕಾಡಿನಂತೆ ದಟ್ಟವಾದ ಮರಗಳು ಇರುವ ಸ್ಥಳದಲ್ಲಿ, ನೆರಳಿನಿಂದ ಕೂಡಿದ ನೂರಾರು ಮರ ಬೇರು ಬಿಟ್ಟಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ಸಾಧ್ಯವೇ? ಎಂಬ ಬಗ್ಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.