ಬೆಂಗಳೂರು: ರಾಜ್ಯದ ಜನೌಷಧಿ ಅಂಗಡಿಗಳಿಗೆ ಔಷಧ ಪೂರೈಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ಇನ್ನೂ ಎರಡು ವಿತರಣಾ ಕೇಂದ್ರಗಳಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸಚಿವರು ಜನೌಷಧಿ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಿ ಅವರ ಕುಂದು-ಕೊರತೆ, ಬೇಡಿಕೆಯನ್ನು ಆಲಿಸಿದರು. ರಾಜ್ಯದಲ್ಲಿ ಜನೌಷಧಿ ಸರಬರಾಜು ಮತ್ತು ಮಾರಾಟದ ವ್ಯವಸ್ಥೆ ಬಲಪಡಿಸಲು ಹಾಗೂ ಜನೌಷಧಿ ಬಳಕೆಯನ್ನು ಜನಪ್ರಿಯಗೊಳಿಸುವ ಬಗ್ಗೆ ಮುಕ್ತ ಚರ್ಚೆ ನಡೆಸಿದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಜನೌಷಧಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ಹುಬ್ಬಳ್ಳಿಯಲ್ಲಿ ಜನೌಷಧ ವಿತರಣಾ ಕೇಂದ್ರ ಆರಂಭಿಸಲು ಲೈಸನ್ಸ್ ನೀಡಲಾಗಿದ್ದು ಅದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಹಾಗೆಯೇ ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ವಿತರಣಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.
ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿ. ಮೋದಿಯವರ ಸರ್ಕಾರ ಬಂದಾಗಿನಿಂದ ದೇಶಾದ್ಯಂತ 7,000ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳನ್ನು (ಅಂಗಡಿಗಳನ್ನು) ಆರಂಭಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 849 ಜನೌಷಧಿ ಅಂಗಡಿಗಳನ್ನು ತೆರೆಯಲಾಗಿದ್ದು ಈ ವರ್ಷ 125 ಕೋಟಿ ರೂಪಾಯಿಗೂ ಮಿಕ್ಕಿ ವಹಿವಾಟು ನಡೆಯಲಿದೆ. ನಾಡಿನ ಮೂಲೆಮೂಲೆಯಲ್ಲಿಯೂ ಜನೌಷಧವನ್ನು ಜನಪ್ರಿಯಗೊಳಿಸಬೇಕಿದೆ. ಸರ್ಕಾರಿ ಆಸ್ಪತ್ರೆ ಇರುವಲ್ಲೆಲ್ಲ ಜನೌಷಧಿ ಕೇಂದ್ರ ಇರಬೇಕು ಎಂಬುದು ನಮ್ಮ ಉದ್ದೇಶ. ಕನಿಷ್ಠಪಕ್ಷ ಸರ್ಕಾರಿ ವೈದ್ಯರಾದರೂ ಬ್ರಾಂಡೆಡ್ ಔಷಧಗಳ ಬದಲಿಗೆ ಜನೌಷಧಿಯನ್ನೇ ಬರೆದುಕೊಡುವಂತಾಗಬೇಕು. ಇದರಿಂದ ಬಡವರಿಗೆ ದೊಡ್ಡಮಟ್ಟದಲ್ಲಿ ಹಣದ ಉಳಿತಾಯವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಸಹಕಾರ ಬಹುಮುಖ್ಯ. ಇವೆಲ್ಲ ವಿಷಯಗಳ ಬಗ್ಗೆ ರಾಜ್ಯ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಹೇಳಿದರು.
ಜನೌಷಧ ಅಂಗಡಿಗಳಲ್ಲಿ ಕೈಗೆಟುಕುವ ದರಗಳಲ್ಲಿ ಆಯುರ್ವೇದ ಔಷಧಗಳನ್ನು ಲಭ್ಯವಾಗಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ಆರಂಭಿಕವಾಗಿ ಸುಮಾರು 250 ನಮೂನೆಯ ಔಷಧಗಳನ್ನು ಗುರುತಿಸಲಾಗಿದೆ. ಆದರೆ ಜನೌಷಧಿ ಕೇಂದ್ರಗಳಲ್ಲಿ ಜಾನುವಾರು ಔಷಧಗಳನ್ನು ಕೂಡಾ ಪೂರೈಸಬೇಕೆಂಬ ಬೇಡಿಕೆ ಬಗ್ಗೆ ಮುಂಬರುವ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.