ಬೆಂಗಳೂರು:ಚಿತ್ರದುರ್ಗದಲ್ಲಿ ಅಸ್ವಸ್ಥರಾಗಿ ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜ್ನಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಲೋ ಶುಗರ್ನಿಂದ ಅಸ್ವಸ್ಥರಾಗಿದ್ದ ಡಿ.ವಿ.ಸದಾನಂದಗೌಡ ಚಿಕಿತ್ಸೆಗಾಗಿ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಿಡುಗಡೆಯಾದ ಬಳಿಕ ಮಾತನಾಡಿರುವ ಅವರು, ಪೋಸ್ಟ್ ಕೋವಿಡ್ ಪರಿಣಾಮ ನನ್ನ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಚಾನಕ್ಕಾಗಿ ನನ್ನ ಲೋಪದಿಂದಾಗಿ ಅಸ್ವಸ್ಥತೆಗೆ ಒಳಗಾಗಬೇಕಾಯಿತು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದ ಕಾರಣ ಮತ್ತು ಸ್ವಲ್ಪಮಟ್ಟಿನ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಸಕ್ಕರೆ ಪ್ರಮಾಣ ಕಡಿಮೆಯಾಗಿ ಈ ಸಮಸ್ಯೆ ಎದುರಾಯಿತು ಎಂದು ಅವರು ತಿಳಿಸಿದ್ದಾರೆ. ನಿನ್ನೆ ಮತ್ತು ಇಂದು ಚಿಕಿತ್ಸೆ ಪಡೆದ ನಂತರ ಗುಣಮುಖನಾಗಿದ್ದೇನೆ. ಸ್ವಲ್ಪ ಜಾಗ್ರತೆಯಿಂದ ಇರಬೇಕಿದೆ ಎಂದರು.