ಬೆಂಗಳೂರು: ಕೆಂಪು ವಲಯದಲ್ಲಿರುವ ಪಾದರಾಯನಪುರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಇಂದು ಭೇಟಿ ನೀಡಿ, ಕೋವಿಡ್-19 ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.
ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಷಾ, ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರ ಜತೆ ಸಮಾಲೋಚಿಸಿ ಸೋಂಕು ಹರಡದಂತೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
ಕಂಟೇನ್ಮೆಂಟ್ ಪ್ರದೇಶದಲ್ಲಿರುವ ಏಳೂವರೆ ಸಾವಿರ ಮನೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವುದರಿಂದ ಸೋಂಕು ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೋಂಕು ಹರಡುವಿಕೆ ಸರಪಳಿಯನ್ನು ತುಂಡರಿಸಲು ಟೆಸ್ಟ್ ಸಂಖ್ಯೆ ಹೆಚ್ಚಿಸುವುದು, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಅನಗತ್ಯ ತಿರುಗಾಟಕ್ಕೆ ಕಟ್ಟುನಿಟ್ಟಾಗಿ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವಲಯದಲ್ಲಿರುವ ಎಲ್ಲಾ ಏಳು ಸಾವಿರದ ಐನೂರು ಮನೆಗಳಲ್ಲಿರುವ ಹಿರಿಯ ನಾಗರಿಕರನ್ನು ಸೋಂಕು ತಪಾಸಣೆಗೆ ಒಳಪಡಿಸುವಂತೆ ಸೂಚನೆ ನೀಡಿದ್ರು. ಹೆಚ್ಚಿನ ಸ್ಯಾಂಪಲ್ ಪರೀಕ್ಷೆಗೆ ಅವಕಾಶ ಇರುವ ಕಿದ್ವಾಯಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆದೇಶ ನೀಡಿದರು. ಸ್ಯಾಂಪಲ್ ಸಂಗ್ರಹಕ್ಕೆ ಮೊಬೈಲ್ ಕಿಯೋಸ್ಕ್ಗಳನ್ನು ಆ ವಾರ್ಡಿಗೆ ಕಳಿಸುವಂತೆ ಅಧಿಕಾರಿಗಳಿಗೆ ಡಾ. ಸುಧಾಕರ್ ಸ್ಥಳದಲ್ಲಿಯೇ ಆದೇಶಿಸಿದರು.