ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕದ ಹಿನ್ನೆಲೆಯಲ್ಲಿ ಸ್ವಯಂ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವೆ: ಸಚಿವ ಸುಧಾಕರ್ - Sudhakar tweet
ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ನಿವಾರಣೆಗೆ ಸ್ವಯಂ ನಾನೇ ಕ್ವಾರೆಂಟೈನ್ನಲ್ಲಿದ್ದೆ. ಇಂದಿಗೆ ನನ್ನ ಕ್ವಾರಂಟೈನ್ ಅವಧಿ ಮುಗಿದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ಸೋಂಕಿನ ಶಂಕೆ ನಿವಾರಣೆಗೆ ನನ್ನ ಕ್ವಾರೆಂಟೈನ್ ಅವಧಿ ಇಂದಿಗೆ ಮುಗಿದಿದ್ದು, ಇಂದು ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದೇನೆ. ವರದಿ ನೆಗೆಟಿವ್ ಬಂದಿದೆ. ಹಾಗಾಗಿ ನಾಳೆಯಿಂದ ಪೂರ್ಣ ಮುನ್ನೆಚ್ಚರಿಕೆ ವಹಿಸಿ, ಎಂದಿನಂತೆ ನಿಯತವಾಗಿ ಕಾರ್ಯನಿರ್ವಹಿಸಲಿದ್ದೇನೆ. ಎಲ್ಲಾ ಹಿತೈಷಿಗಳ ಹಾರೈಕೆ, ಹಿರಿಯರ ಆಶೀರ್ವಾದಗಳಿಗೆ ಧನ್ಯವಾದಗಳು ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸೋಂಕಿತ ಕ್ಯಾಮರಾಮನ್ ಸಂಪರ್ಕದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದ ಐವರು ಸಚಿವರ ಕ್ವಾರಂಟೈನ್ ಅವಧಿ ಮುಗಿದಿದ್ದು, ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹಾಗೂ ಸಚಿವ ಸಿ.ಟಿ.ರವಿ ಇಂದೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಸುಧಾಕರ್ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ವಿ.ಸೋಮಣ್ಣ ಕೂಡ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.