ಕರ್ನಾಟಕ

karnataka

ETV Bharat / state

ತುಮಕೂರು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸಚಿವ ಡಾ.ಜಿ ಪರಮೇಶ್ವರ ಮನವಿ

ಮಳೆ ಕೊರತೆ ಹಿನ್ನೆಲೆ ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸುವಂತೆ ಸಚಿವ ಡಾ ಜಿ ಪರಮೇಶ್ವರ ಕಂದಾಯ ಸಚಿವರಿಗೆ ಪತ್ರ ಬರೆದಿದ್ದಾರೆ.

Minister Dr G Parameshwar
ಸಚಿವ ಡಾ.ಜಿ ಪರಮೇಶ್ವರ

By ETV Bharat Karnataka Team

Published : Aug 25, 2023, 6:54 AM IST

ಬೆಂಗಳೂರು: ತುಮಕೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಕೋರಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ತುಮಕೂರು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 10,64,755 ಹೆಕ್ಟೇರ್​ಗಳಿದ್ದು ಕೇಂದ್ರ ಒಣ ವಲಯ (ವಲಯ-4), ಪೂರ್ವ ಒಣವಲಯ (ವಲಯ-5) ಹಾಗೂ ದಕ್ಷಿಣ ಒಣ ವಲಯ (ವಲಯ-6) ಕೃಷಿ ವಲಯಗಳಿಗೆ ಒಳಪಟ್ಟಿರುತ್ತವೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅವಶ್ಯಕತೆಯಿರುವ ನೈರುತ್ಯ ಮಾರುತಗಳಿಂದ (1ನೇ ಜೂನ್ 2023 ರಿಂದ ಆಗಸ್ಟ್ 2023 ರವರೆಗೆ) 179 ಮಿ.ಮೀ. ವಾಡಿಕೆ ಮಳೆಗೆ 164 ಮಿ.ಮೀ. ಮಾತ್ರ ಮಳೆ ಆಗಿದ್ದು, ಶೇ. 9ರಷ್ಟು ಮಳೆ ಕೊರತೆಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಲೂಕುವಾರು ಮಾಸಿಕ ವಾಸ್ತವಿಕ ಸರಾಸರಿ ಮಳೆಯನ್ನು ಅವಲೋಕಿಸಿದಾಗ ಜೂನ್ ತಿಂಗಳಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ ಗುಬ್ಬಿ, ಕೊರಟಗೆರೆ, ಕುಣಿಗಲ್‌, ಮಧುಗಿರಿ, ಪಾವಗಡ, ತುರುವೆಕೆರೆ ಹಾಗೂ ತುಮಕೂರು ಮತ್ತು ಜುಲೈನಲ್ಲಿ 4 ತಾಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಕುಣಿಗಲ್ ಮತ್ತು ಮಧುಗಿರಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮುಖ್ಯವಾಗಿ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಎಲ್ಲ 10 ತಾಲೂಕುಗಳಲ್ಲಿ ಮಳೆಯ ಕೊರತೆ ಆಗಿರುತ್ತದೆ. ಮುಂದುವರೆದು ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 53 ಮಿ.ಮೀ ಇದ್ದು, ವಾಸ್ತವಿಕವಾಗಿ ಕೇವಲ 16 ಮಿ.ಮೀ ಮಳೆ ಆಗಿದ್ದು, ಶೇ. 70ರಷ್ಟು ಮಳೆಯ ಕೊರತೆಯಾಗಿರುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 3,14,630 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಮಳೆಯ ಅಭಾವದಿಂದಾಗಿ ಇಲ್ಲಿಯವರೆಗೆ ಕೇವಲ 1,96,782 ಹೆಕ್ಟೇರ್ (62.54%) ಬಿತ್ತನೆ ಆಗಿರುತ್ತದೆ. ಆ ಪೈಕಿ ಪ್ರಸ್ತುತ ಮಳೆಯ ಅಭಾವದಿಂದ ರಾಗಿ, ಶೇಂಗಾ, ಮುಸುಕಿನ ಜೋಳ ಹಾಗೂ ಇತರೆ ಬೆಳೆಗಳು ಒಟ್ಟು 1,21,792 ಹೆಕ್ಟೇರ್ (62%) ಪ್ರದೇಶದಲ್ಲಿ ಬಾಡುತ್ತಿದ್ದು, ಗಣನೀಯವಾಗಿ ಇಳುವರಿಯಲ್ಲಿ ನಷ್ಟವಾಗುವ ಸಂಭವವಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ವಿನಂತಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗವನ್ನು ಬರ ಪೀಡಿತ ಜಿಲ್ಲೆಯಾಗಿ ಘೋಷಿಸಲು ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ:ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಬರಗಾಲ ಘೋಷಣೆಗೆ ಕೇಂದ್ರದ ಷರತ್ತುಗಳು ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸಡಿಲಿಕೆ ಮಾಡುವಂತೆ ಇತ್ತೀಚೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​​ಗೆ ಪತ್ರ ಬರೆದಿದ್ದರು. ಬರ ಪರಿಹಾರಕ್ಕೆ ಕೇಂದ್ರ ಶೇಕಡ 75ರಷ್ಟು ಅನುದಾನ ನೀಡಿದರೆ, ರಾಜ್ಯ ಸರ್ಕಾರ ಶೇಕಡ 25ರಷ್ಟು ಅನುದಾನ ನೀಡಲಿದೆ. ಹೀಗಾಗಿ ಕೇಂದ್ರದ ಷರತ್ತುಗಳನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಕೋರಲಾಗಿತ್ತು.

ಇದನ್ನೂ ಓದಿ:ರಾಜ್ಯದಲ್ಲಿ ಮುಂಗಾರು ಕೊರತೆ: ಬರ ಘೋಷಣೆಗಾಗಿ ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ

ABOUT THE AUTHOR

...view details