ಬೆಂಗಳೂರು :ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನವನ್ನು ಕಡೆಗಣಿಸುವಂತೆಯೇ ಇಲ್ಲ. ವಿಜ್ಞಾನ ಕಲಿಕೆಗೆ ಸರಕಾರದಿಂದ ಹೆಚ್ಚು ಉತ್ತೇಜನ, ವೈಜ್ಞಾನಿಕ ಸಂಸ್ಕಾರಕ್ಕೆ ಒತ್ತು ನೀಡಲಾಗುವುದು. ಮೂಲ ವಿಜ್ಞಾನ ಕಲಿಕೆಗೆ ಹೆಚ್ಚು ಆದ್ಯತೆ ನೀಡುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಹೆಚ್ಚು ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್ತು ಏರ್ಪಡಿಸಿದ್ದ 28ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಾವ ದೇಶ ವಿಜ್ಞಾನವನ್ನು ಉಪೇಕ್ಷಿಸುತ್ತದೆಯೋ ಆ ದೇಶ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು.