ಬೆಂಗಳೂರು: ಆಶಾ ಕಾರ್ಯಕರ್ತೆಯರು ಖಾಯಂ ನೌಕರರಲ್ಲ ಹಾಗಾಗಿ ಅವರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ, ಆದರೆ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳೆಲ್ಲವೂ ಅವರಿಗೆ ಅನ್ವಯವಾಗಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಶಾ ಕಾರ್ಯಕರ್ತೆಯರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ, ಅವರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅದಕ್ಕಾಗಿ ರಾಜ್ಯ ಸರ್ಕಾರ ಅವರಿಗೆ ಐದು ಸಾವಿರ ರೂ.ಗೌರವಧನ ಕೊಡುತ್ತಿದೆ, ಇದರ ಜೊತೆಗೆ 5 ರಿಂದ 8 ಸಾವಿರ ಅವರ ಕೆಲಸದ ಆಧಾರದಲ್ಲಿ ಇನ್ಸೆಂಟಿವ್ ಸಿಗಲಿದೆ. ಇನ್ಸೆಂಟಿವ್ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡರ ಪಾಲೂ ಇದೆ. ಆದರೆ, ಅವರಿಗೆ ಪಿಂಚಣಿ ನೀಡಲಾಗಲ್ಲ, ಅವರು ಖಾಯಂ ನೌಕರರಲ್ಲದ ಕಾರಣ ಅವರಿಗೆ ಪಿಂಚಣಿ ನೀಡುವ ಪ್ರಸ್ತಾಪ ಸದ್ಯಕ್ಕೆ ಇಲ್ಲ. ಈಗಿರುವ ಪ್ರಕಾರ ಕೊಡಲು ಸಾಧ್ಯವೂ ಇಲ್ಲ. ಭವಿಷ್ಯದಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಅವರ ಎಲ್ಲಾ ಸೇವೆಗೆ ಸಂಭಾವನೆ ಕೊಡಲಾಗುತ್ತಿದೆ. ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಆಶಾ ಕಾರ್ಯಕರ್ತೆಯರಿಗೆ ಸಿಗಲಿದೆ. ಅವರ ಕೆಲಸಕ್ಕೂ ಯೋಜನೆಗೂ ಸಂಬಂಧ ಇಲ್ಲ, ಅವರೆಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಹರಿದ್ದಾರೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಸ್ಮಾರ್ಟ್ ಫೋನ್ ಅವಶ್ಯಕತೆ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ ಹಾಗಾಗಿ ಸ್ಮಾರ್ಟ್ ಫೋನ್ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಉಳ್ಳಾಲ ಸರ್ಕಾರಿ ಆಸ್ಪತ್ರೆಗೆ ಯೆನಪೋಯಾ ಸಹಕಾರ:ಉಳ್ಳಾಲದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯೆನಪೋಯಾ ಆಸ್ಪತ್ರೆ ಸಹಕಾರ ಪಡೆದು ಉತ್ತಮ ಚಿಕತ್ಸಾ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಫಾರೂಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಸಮುದಾಯ ಆರೋಗ್ಯ ಕೇಂದ್ರವಾಗಿದೆ. ಒಟ್ಟು 25 ಜನ ಸೇವೆ ಮಾಡುತ್ತಿದ್ದಾರೆ. ವೈದ್ಯರು, ತಜ್ಞರು ಇದ್ದಾರೆ ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ನಡೆಯುತ್ತಿದೆ. ಯೆನಪೋಯಾ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಎಷ್ಟು ಕೋರ್ಸ್ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವ ತರಗತಿಗೆ ಯಾವ ಪರೀಕ್ಷೆಯನ್ನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ನ ಮಧು ಜಿ ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ ಸುಧಾಕರ್, ಕೆಎಸ್ಓಯುನಡಿ ವಾರ್ಷಿಕ ಪರೀಕ್ಷೆ ನಡೆಸುವುದನ್ನು ಮುಂದುವರೆಸಿದೆ. ಕೆಲವು ಸೆಮಿಸ್ಟರ್ ಪರೀಕ್ಷೆ ಇದೆ. ದೂರ ಶಿಕ್ಷಣಕ್ಕೂ, ಕಾಲೇಜು ಶಿಕ್ಷಣಕ್ಕೂ ಸಮಾನವಾದ ಸ್ಥಾನಮಾನ ಸಿಗಬೇಕು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಅರಣ್ಯ ಜಮೀನು ಮರುವಶಕ್ಕೆ ಸಂಕಲ್ಪ: ಬೆಂಗಳೂರಿನ ಸುತ್ತಮುತ್ತ ಭೂಮಿಗೆ ಚಿನ್ನದ ಬೆಲೆ ಇದೆ. ಹೀಗಾಗಿ ಭೂ ಕಬಳಿಕೆ ಮಾಡುವುದು ಹೆಚ್ಚಾಗಿದೆ. 2004 ರಿಂದ ಪ್ರಕರಣ ದಾಖಲಾಗಿದರೂ ಅವರ ವಿರುದ್ಧ ಕ್ರಮ ಆಗಿಲ್ಲ ಎನ್ನುವ ಕುರಿತು ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದಅರಣ್ಯ ಸಚಿವ ಈಶ್ವರ ಖಂಡ್ರೆ, ಬೆಂಗಳೂರು ವ್ಯಾಪ್ತಿಯಲ್ಲಿ 339 ಪ್ರಕರಣದಲ್ಲಿ ಒತ್ತುವರಿ ತೆರವುಗೊಳಿಸುವ ಆದೇಶವಾಗಿದೆ, 69 ಪ್ರಕರಣ ಒತ್ತುವರಿ ತೆರವುಗೊಳಿಸಿದ್ದೇವೆ. ಕೆಲವರು ಹೈಕೋರ್ಟಿನಿಂದ ಸ್ಟೇ ತಂದಿದ್ದಾರೆ, ಎಲ್ಲೆಲ್ಲಿ ತೀರ್ಮಾನ ಆಗಿದೆಯೋ ಅಲ್ಲೆಲ್ಲ ತೆರವುಗೊಳಿಸುವ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದೇವೆ. ಅರಣ್ಯ ಇಲಾಖೆಯ ಜಮೀನು ಸಂಪೂರ್ಣ ಮರುವಶಕ್ಕೆ ಸಂಕಲ್ಪ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿ ನೆರವಾಗಲಿದೆ: ಡಿ.ಕೆ ಶಿವಕುಮಾರ್