ಬೆಂಗಳೂರು: "ಆಪರೇಷನ್ ಕಮಲ ಪ್ರಯತ್ನ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಮಾಡ್ತಿದ್ದಾರೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, "ವಾಮಮಾರ್ಗದ ಮೂಲಕ ಹೇಗಾದ್ರೂ ಮಾಡಿ ಸರ್ಕಾರದಲ್ಲಿ ಇರಬೇಕು ಅನ್ನೋದು ಅವರ ಉದ್ದೇಶ. ಬಿಜೆಪಿಯವರು ಈ ದೇಶದ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ. ಜನ ಅವರನ್ನು ತಿರಸ್ಕಾರ ಮಾಡಿ ಸೋಲಿಸಿ ಮನೆಗೆ ಕಳಿಸಿದ್ದಾರೆ. ಅವರು ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಬಿಜೆಪಿಯವರು ವಿರೋಧ ಪಕ್ಷಕ್ಕೆ ಕಳಂಕ. ಇದು ನಾಚಿಕೆಗೇಡಿನ ಸಂಗತಿ. ವಿರೋಧ ಪಕ್ಷಕ್ಕೆ ನಾಯಕ ಇಲ್ಲ. ಮೇಲ್ಮನೆ ನಾಯಕನೂ ಇಲ್ಲ. 4 ವರ್ಷ ಸರ್ಕಾರ ಮಾಡಿದ್ದರೂ ಜನ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ" ಎಂದು ಕಿಡಿಕಾರಿದರು.
"ಇದನ್ನು ಅರಿತುಕೊಂಡು ಈಗಲಾದರೂ ಸರಿಯಾಗಿ ಕೆಲಸ ಮಾಡೋದು ಬಿಟ್ಟು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ಏನೇ ಪ್ರಯತ್ನ ಮಾಡಲಿ. ಸರ್ಕಾರ ಸುಭದ್ರವಾಗಿರಲಿದೆ. ಬಿಜೆಪಿ ಅವರ ಬಳಿ ಬೇಕಾದಷ್ಟು ಹಣ ಇದೆ. ಎಷ್ಟು ಕೋಟಿ ಬೇಕಾದರೂ ಅವರಿಗೆ ಕೊಡೋಕೆ ಹಣ ಇದೆ. 100 ಕೋಟಿ, 1,000 ಕೋಟಿ ಬೇಕಾದರೂ ಖರ್ಚು ಮಾಡ್ತಾರೆ. ದುಡ್ಡಿನ ಅಹಂ, ಅಧಿಕಾರದ ಅಹಂ ಇದೆ" ಎಂದು ವಾಗ್ದಾಳಿ ನಡೆಸಿದರು.