ಬೆಂಗಳೂರು :ಯಾವುದೇ ಜಾತಿ ನಿಂದನೆ ಮಾಡಿಲ್ಲ. ಎಲ್ಲ ಜಾತಿಗಳ ಮೇಲೆ ನನಗೆ ಗೌರವ ಇದೆ. ನಾನು ಯಾವುದೇ ತಪ್ಪುಮಾಡಿಲ್ಲ ಎಂದು ಸಚಿವ ಡಿ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಮೇಲಿನ ಭೂ ಕಬಳಿಕೆ, ಜಾತಿ ನಿಂದನೆ ದೂರು ಸಂಬಂಧ FIR ದಾಖಲಾದ ವಿಚಾರವಾಗಿ ಪ್ರತಿಕ್ರಿಯಿಸಿ, ಇದು 15 ವರ್ಷಗಳ ಹಳೆಯ ಪ್ರಕರಣವಾಗಿದೆ. 2008ರಲ್ಲಿ ನಡೆದಿದ್ದು, ಈಗ್ಯಾಕೆ ಹೊರ ತಂದಿದ್ದಾರೆ ಎಂದು ಗೊತ್ತಿಲ್ಲ. ನಾನ್ಯಾವ ಭೂಮಿಯನ್ನು ಕಬಳಿಕೆ ಮಾಡಿಲ್ಲ. ನಾನು ಯಾವುದೇ ಜಾತಿ ನಿಂದನೆಯನ್ನು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾನು ಸಹ ಅಲ್ಪಸಂಖ್ಯಾತ ಸಮುದಾಯದಿಂದ ಬಂದವನು. ನನ್ನ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಇದೊಂದು ಷಡ್ಯಂತ್ರ. ನ್ಯಾಯ, ಸತ್ಯ ನನ್ನ ಪರವಾಗಿದೆ. ತಪ್ಪು ಮಾಡಿದ್ರೆ ತಾನೆ ಹೆದರಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಪ್ರಕರಣ ಕೋರ್ಟ್ ನಲ್ಲಿದೆ, ವಿಚಾರಣೆ ನಡೆಯುತ್ತಿದೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತದೆ, ಆದ್ರೆ ನಾನು ತಪ್ಪೇ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ನಾನು ಮೋಸ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಎಸ್ಸಿ ಎಸ್ಟಿ ಮತಗಳಿಂದಲೇ ನಾನು 4 ಬಾರಿ ಗೆದ್ದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಹೇಳೋಕೆ?. ಅವರು ಎಷ್ಟು ಜನ ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ?. ತಪ್ಪು ಮಾಡಿ ಶಿಕ್ಷೆ ಅನುಭವಿಸಿದವರು ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ನಿರಪರಾಧಿ. ಈ ಪ್ರಕರಣದಿಂದ ಹೊರಬರ್ತೀನಿ ಅನ್ನೋ ವಿಶ್ವಾಸ ನನಗೆ ಇದೆ. ನಮ್ಮ ನಾಯಕರಿಗೆ ಈ ಪ್ರಕರಣದ ಬಗ್ಗೆ ದಾಖಲೆ ಸಮೇತ ವರದಿ ಕೊಡುತ್ತೇನೆ ಎಂದು ಹೇಳಿದರು.
ಬ್ರಾಹ್ಮಣ ಮತ್ತು ಜೈನ ಸಂಸ್ಕೃತಿ ಒಂದೇ :ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬ್ರಾಹ್ಮಣ ಸಮುದಾಯವನ್ನು ನಿಂದಿಸುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಾನು ಒಬ್ಬ ಅಲ್ಪಸಂಖ್ಯಾತ. ಬ್ರಾಹ್ಮಣ ಸಂಸ್ಕೃತಿ ಹಾಗೂ ಜೈನ್ ಸಂಸ್ಕೃತಿ ಎರಡು ಒಂದೇ ಎಂದರು. ಅವರೂ ಜನಿವಾರ ಹಾಕ್ತಾರೆ. ನಾವೂ ಜನಿವಾರ ಹಾಕುತ್ತೇವೆ. ನಾನು ಯಾವುದೇ ಜಾತಿಯ ಬಗ್ಗೆ ನಿಂದನೆ ಮಾಡಿಲ್ಲ. ಅವರು ಯಾವ ಆಚಾರ ಮಾಡುತ್ತಾರೆ ನಾವೂ ಅದನ್ನು ಮಾಡುತ್ತೇವೆ. ಈ ಆರೋಪವನ್ನು ಉದ್ದೇಶಪೂರ್ವಕವಾಗಿ, ನನ್ನ ತೇಜೋವಾಧೆ ಮಾಡಲು ಮಾಡುತ್ತಿದ್ದಾರೆ. ಇದರ ಹಿಂದೆ ಪಿತೂರಿ ಇದೆ ಎಂದು ತಿಳಿಸಿದರು.
ಇದನ್ನೂ ಓದಿ :ಸಚಿವ ಸುಧಾಕರ್ ತಕ್ಷಣವೇ ರಾಜೀನಾಮೆ ನೀಡಬೇಕು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್