ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿರುವುದು ದುರಾದೃಷ್ಟಕರ. ಗಲಭೆಯಲ್ಲಿ 22 ಮಂದಿ ಸಾವಿಗೀಡಾಗಿದ್ದಾರೆ. ಇದರ ಸತ್ಯಾಸತ್ಯತೆ ಪರಿಶೋಧನೆ ಆಗಬೇಕಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಯಾರ ಪೌರತ್ವವನ್ನು ಕಿತ್ತುಕೊಳ್ಳೋದಲ್ಲ ಎಂದು ನೂರಾರು ಬಾರಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಆದರೆ ಈಗ ನಡೆಯುತ್ತಿರವ ಹೋರಾಟದ ಹಿಂದೆ ಷಡ್ಯಂತ್ರ ಇದೆ. ಈ ಹಿಂದೆ ಬೇರೆ ಬೇರೆ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ನಡೆಯಿತು. ಪ್ರಶಸ್ತಿ ವಾಪಸಾತಿ ನಾಟಕವೂ ನಡೆಯಿತು. ಎಲ್ಲ ವಿಫಲವಾದ ನಂತರ ಈಗ ಸಿಎಎ ವಿರೋಧಿ ಹೆಸರಿನಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ನಿರಾಶ್ರಿತ ರಾಗಿ ಬಂದವರಿಗೆ ಪೌರತ್ವ ಕೊಡುವ ಕಾಯಿದೆ ಇದು. ಜವಹಾರಲಾಲ್ ನೆಹರು ಅವರಿಂದ ಮನಮೋಹನ್ ಸಿಂಗ್ವರೆಗೂ ಸಾಕಷ್ಟು ನಾಯಕರು ನಿರಾಶ್ರಿತರಿಗೆ ಪೌರತ್ವ ಕೊಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಈಗ ಕಾಂಗ್ರೆಸ್ ರಾಜಕೀಯ ಕಾರಣಗಳಿಗಾಗಿ ಸಿಎಎ ಅನ್ನು ವಿರೋಧ ಮಾಡುತ್ತಿದೆ. ನಮ್ಮ ದೇಶದಲ್ಲಿ ಧಾರ್ಮಿಕ ನಿರಾಶ್ರಿತರಾಗಿದ್ದು ಹಿಂದೂಗಳು ಮಾತ್ರ ಎಂದರು.
ನುಸುಳುಕೋರರೇ ಬೇರೆ, ನಿರಾಶ್ರಿತರೇ ಬೇರೆ. ನುಸುಳುಕೋರರು ದೇಶದ ಆಂತರಿಕ ಭದ್ರತೆಗೆ ಮಾರಕ. ಆದರೆ ಇವರಿಬ್ಬರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಲಾಗುತ್ತಿದೆ. ಆಂತರಿಕ ಯುದ್ಧಕ್ಕೆ ಅಣಿಗೊಳಿಸುವ ಕೆಲಸವನ್ನು ಒಳಗೊಳಗೇ ಮಾಡಲಾಗುತ್ತಿದೆ. ಪಾಕ್ ಪರ ಘೋಷಣೆಗಳು, ಫ್ರೀ ಕಾಶ್ಮೀರ ಪರ ಫಲಕಗಳನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಮೆರಿಕ ಅಧ್ಯಕ್ಷರು ಬಂದಾಗಲೇ ಇಂತಹ ಘಟನೆಗಳು ನಡೆದಿದೆ ಎಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುವ ಷಡ್ಯಂತ್ರ ಇದು. ಸಿಎಎ ಕಾಯ್ದೆ ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಈ ಹೋರಾಟಕ್ಕೆ ಬೆಂಬಲ ಕೊಟ್ಟರೆ ಅದು ಸಂವಿಧಾನ ಬಾಹಿರ. ವಿನಾ ಕಾರಣ ರಮೇಶ್ ಕುಮಾರ್ ಅಂತಹವರು ಪ್ರಚೋದನಕಾರಿ ಮಾತುಗಳನ್ನಾಡುತ್ತಿದ್ದಾರೆ. ಒಂದು ದಿನವಾದರೂ ಕಾಶ್ಮೀರಿ ಪಂಡಿತರ ಪರ ಕಣ್ಣೀರು ಹಾಕಿದವರಲ್ಲ ಇವರೆಲ್ಲ ಎಂದು ಟೀಕಿಸಿದರು. ಕೆಲವರಿಗೆ ಎಲ್ಲದರ ಮೇಲೂ ಅನುಮಾನ. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟರೆ ಅನುಮಾನ. ಚುನಾವಣೆಯಲ್ಲಿ ಸೋತರೆ ಇವಿಎಂಗಳ ಮೇಲೆ ಅನುಮಾನ. ತಮಗೆ ವಿರುದ್ಧವಾದ ಎಲ್ಲ ವಿಚಾರಗಳನ್ನು ವಿರೋಧಿಸುವ ರೋಗ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಭಾರತದ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದರ ಅರಿವು ಮೊದಲೇ ಇತ್ತು. ಐದನೇ ಜಗತ್ತಿನ ಆರ್ಥಿಕ ಶಕ್ತಿಯಾಗಿ ಭಾರತ ಬದಲಾಗುತ್ತಿದೆ. ಜಿಎಸ್ಟಿ, ನೋಟು ಅಮ್ಯಾನೀಕರಣದಂತಹ ಯೋಜನೆಗಳ ಅನುಷ್ಠಾನ ಆಗುವ ಸಂದರ್ಭದಲ್ಲಿ ಇಂತಹ ಸಣ್ಣ ಹಿನ್ನಡೆಗಳು ಆಗುತ್ತವೆ. ಇನ್ನು ಎರಡು ವರ್ಷಗಳ ಹೊತ್ತಿಗೆ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತದೆ ಎಂದು ಆರ್ಥಿಕ ಕುಸಿತದ ಬಗ್ಗೆ ಸಮರ್ಥಿಸಿಕೊಂಡರು.