ಬೆಂಗಳೂರು: ನನಗೆ ಇಲಾಖೆಯ ಜವಾಬ್ದಾರಿ ಕೊಟ್ಟು ಒಂದು ವರ್ಷ ಆಗಿದೆ. ನಾನು ಸಾಧನೆ ಮಾಡಿದ್ದೇನೆಂದು ಬೆನ್ನು ತಟ್ಟಿಕೊಳ್ಳಲ್ಲ. ಆದರೆ ದೃಢ ಹೆಜ್ಜೆ ಇಟ್ಟಿರುವುದನ್ನು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ವಿಧಾನಸೌಧದಲ್ಲಿ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂತೃಪ್ತಿಯ ಕಾಲದಲ್ಲಿ ವಿಜೃಂಭಿಸುವ ಇಲಾಖೆಗಳಾಗಿವೆ. ಆದರೆ ದುರದೃಷ್ಟ ಅಂದರೆ ಅತಿವೃಷ್ಟಿ ಮತ್ತು ಕೋವಿಡ್ನಿಂದ ವಿಜೃಂಭಿಸಲು ಸಾಧ್ಯವಾಗಿಲ್ಲ. ಕೋವಿಡ್ನಿಂದಾಗಿ ಒಂದಿಷ್ಟು ಬದಲಾವಣೆ ಆಯ್ತು. ಈ ಮಧ್ಯೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದೇನೆ. ಆರು ತಿಂಗಳು ಕೋವಿಡ್ನಿಂದ ಕೆಲಸ ಮಾಡಲು ಆಗಲಿಲ್ಲ ಎಂದು ತಿಳಿಸಿದರು.
ನಮ್ಮ ಮೂರು ಇಲಾಖೆಗಳಲ್ಲಿ ಶೇ. 50ಕ್ಕೂ ಅಧಿಕ ಖಾಲಿ ಹುದ್ದೆಗಳಿವೆ. ಈ ಮಧ್ಯೆ ಸಿಬ್ಬಂದಿ ಕೋವಿಡ್ ಕರ್ತವ್ಯದಲ್ಲೂ ತೊಡಗಿದ್ದಾರೆ. ಪಾರದರ್ಶಕತೆ, ಪ್ರಾಮಣಿಕತೆಯಿಂದ ಕೆಲಸ ಮಾಡಿದ್ದೇವೆ. ಯಾರೂ ಬೊಟ್ಟು ಮಾಡಿ ತೋರಿಸಲು ಅವಕಾಶ ಸಿಗದ ರೀತಿಯಲ್ಲಿ ನಮ್ಮ ಇಲಾಖೆ ಕಾರ್ಯನಿರ್ವಹಿಸಿದೆ ಎಂದರು.
ಕೋವಿಡ್ ಸಂದರ್ಭ ಸಂಕಷ್ಟದಲ್ಲಿದ್ದ ಕಲಾವಿದರಿಗೆ ರೂ. 2,000ನಂತೆ ರಾಜ್ಯದ ಒಟ್ಟು 16924 ಕಲಾವಿದರಿಗೆ 3.38 ಕೋಟಿ ರೂ. ಜಮೆ ಮಾಡಲಾಗಿದೆ. ಕ್ರೀಡೆ, ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯನ್ನು ಒಂದೇ ಇಲಾಖೆಯಡಿ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಕೋವಿಡ್-19ರಿಂದ ಅಪಾರ ನಷ್ಟ ಆಗಿದೆ: ಕೋವಿಡ್-19ನಿಂದ ಅಪಾರ ನಷ್ಟವಾಗಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಜಾಸ್ತಿ ಇದೆ. ಕೋವಿಡ್ನಿಂದ ಉದ್ಯೋಗ ನಷ್ಟವೂ ಉಂಟಾಗಿದೆ ಎಂದರು.