ಬೆಂಗಳೂರು: ವಕ್ಫ್ ಬೋರ್ಡ್ ಹಣವನ್ನು ಕೋವಿಡ್ -19 ಸೇವೆಗೆ ಬಳಸುವುದು ಬೇಡ ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಂವಿಧಾನ ವಿರೋಧಿ ಹೇಳಿಕೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ದೇಣಿಗೆ ನೀಡಬಾರದು ಎಂದು ಹೇಳಿರುವುದು ಖಂಡನೀಯ ಎಂದರು.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಡಿಸ್ಕ್ರಿಮಿನೇಟ್ ಮಾಡುವುದಕ್ಜೆ ಸಂವಿಧಾನದಲ್ಲಿ ಅವಕಾಶವಿಲ್ಲ. ಸೋ ಕಾಲ್ಡ್ ಸೆಕ್ಯೂಲರ್ಸ್ ನೀತಿಗೆ ವಿರುದ್ಧವಾದ ಹೇಳಿಕೆ ಇದು. ಮಾನವೀಯತೆಗೆ ವಿರುದ್ಧವಾಗಿ ಜಾತಿ ಪ್ರತಿಬಿಂಬಿಸುವ ಹೇಳಿಕೆ ಕೊಟ್ಟಿದ್ದಾರೆ. ಮತಾಂಧತೆಯ ಉನ್ಮತ್ತತೆಯಲ್ಲಿ ಬಡಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಾವುದೇ ವಿಚಾರದಲ್ಲೂ ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಜಮೀರ್ ಅವರ ಹೇಳಿಕೆ ನೀತಿಗೆ ವಿರುದ್ಧವಾಗಿದೆ. ಇಂತಹ ಮನಸ್ಥಿತಿಯೇ ಮಾನವೀಯತೆ ವಿರುದ್ಧ ಇದೆ. ಇದು ಒಂದು ಜಾತಿ ಮತ್ತು ಸಮುದಾಯವನ್ನು ಪ್ರತಿಬಿಂಬಿಸುವ ಹೇಳಿಕೆಯಾಗಿದೆ. ಕಾಂಗ್ರೆಸ್ನವರು ಸೆಕ್ಯೂಲರಿಸಂ ಬಗ್ಗೆ ಭಾರೀ ಭಾಷಣ ಮಾಡುತ್ತಾರೆ. ಇದು ಜಮೀರ್ ಹೇಳಿಕೆಯೋ, ಕಾಂಗ್ರೆಸ್ ಹೇಳಿಕೆಯೋ ಎಂಬುದನ್ನು ಸ್ಪಷ್ಟಪಡಿಸಲಿ. ವಕ್ಫ್ ಬೋರ್ಡ್ ಸರ್ಕಾರಕ್ಕಿಂತಲೂ ದೊಡ್ಡದಲ್ಲ ಎಂದು ಕಿಡಿಕಾರಿದರು.
ವಕ್ಫ್ ಬೋರ್ಡ್ಗೆ ಕೊಡುವುದು ಸಾರ್ವಜನಿಕರ ಹಣ. ಜಮೀರ್ ಅಹಮದ್ ಅವರು ಇನ್ನೂ ಜಿನ್ನಾ ಮಾನಸಿಕತೆಯಿಂದ ಹೊರಬಂದಿಲ್ಲ. ಅವರು ಕೊಡುವ ಜಕಾತ್ ಹಣವನ್ನು ನಾವು ಕೇಳಲಿಲ್ಲ. ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಲು ಮುಂದಾದ ಸಂದರ್ಭದಲ್ಲಿ ಇದು ಸರಿಯಲ್ಲ. ಹೀಗೆ ಹೇಳುವ ಅಧಿಕಾರ ಅವರಿಗಿಲ್ಲ ಎಂದು ತಿರುಗೇಟು ನೀಡಿದರು.
ಎಪಿಎಂಸಿ ಕಾಯ್ದೆ, ಯುಪಿಎ ಸರ್ಕಾರ ಇದ್ದಾಗಲೇ 16 ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಕೇವಲ ವಿರೋಧಿಸಬೇಕೆಂದೇ ವಿರೋಧಿಸುವುದು ಸರಿಯಲ್ಲ. ಹೆಚ್ಚು ಮಾರುಕಟ್ಟೆ ಸ್ಥಾಪನೆಯಾದರೆ ರೈತರಿಗೆ ಲಾಭವಾಗುತ್ತದೋ?, ನಷ್ಟವಾಗುತ್ತದೋ? ಎಂದು ಪ್ರಶ್ನಿಸಿದರು. ದಲ್ಲಾಳಿ ಕೇಂದ್ರಿತ ಮಾರುಕಟ್ಟೆಗಳಾಗಿ ಪರಿವರ್ತನೆಯಾಗಿರುವುದು ಸುಳ್ಳಾ?. ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಸಂಚು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಸಿ.ಟಿ. ರವಿ ವ್ಯಂಗ್ಯವಾಡಿದರು.